ಯಕ್ಷಗಾನ ಬೆಳವಣಿಗೆಯಲ್ಲಿ ಸಂಘಸoಸ್ಥೆಗಳ ಕೊಡುಗೆ ಮಹತ್ತರ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಕ್ಷಗಾನ ಬೆಳವಣಿಗೆಯಲ್ಲಿ ಸಂಘಸoಸ್ಥೆಗಳ ಕೊಡುಗೆ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಮೂಡಬಿದ್ರೆಯ ಯಕ್ಷಸಂಗಮ ಸಂಘಟನೆ ಯಶಸ್ವಿ 25ನೇ ವರ್ಷಗಳನ್ನು ಪೂರೈಸಿರುವುದು ಅಭಿನಂದನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಯಕ್ಷ ಸಂಗಮ ಮೂಡಬಿದ್ರೆ ಇದರ 25ನೇ ವರ್ಷದ ಯಕ್ಷಗಾನ ಮತ್ತು ತಾಳಮದ್ದಳೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರ ನೀಡುವ ಸವಲತ್ತುಗಳು ಜನರಿಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಕಾರ್ಯ ನಡೆಯಬೇಕು. ಮಕ್ಕಳು ಮುಂದೆ ದೊಡ್ಡ ಕಲಾವಿದರಾಗುತ್ತಾರೆ ಎನ್ನುವುದಕ್ಕಿಂತಲೂ ಅವರು ಉತ್ತಮ ಪ್ರೇಕ್ಷಕರಾಗಬಲ್ಲರು ಎಂಬುದರಲ್ಲಿ ಸಂಶಯವಿಲ್ಲ. ಅಲ್ಲದೆ ಯಕ್ಷಗಾನದ ಮೂಲಕ ಮಕ್ಕಳಲ್ಲಿ ರಾಮಾಯಣ, ಮಹಾಭಾರತ ಮೊದಲಾದ ಪುರಾಣಗಳ ಜ್ಞಾನ ಮೂಡಿಸಿದರೆ ಅವರಲ್ಲಿ ನೈತಿಕ ಪ್ರಜ್ಞೆ ಬೆಳೆಯುತ್ತದೆ. ತನ್ನ ತಂದೆ ತಾಯಿ, ಗುರುಹಿರಿಯರನ್ನು ಗೌರವಿಸುವ ಕೆಲಸವನ್ನು ಅವರು ಮಾಡುತ್ತಾರೆ ಎಂದ ಅವರು, ಇಂದು ಯಕ್ಷಗಾನ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಲು ಸಂಘ ಸಂಸ್ಥೆಗಳು ಮುಂದಾಗಿರುವುದು ಈ ಕಲೆಯ ಉಳಿವು ಬೆಳವಣಿಗೆಯು ದೃಷ್ಟಿಯಿಂದ ಅತ್ಯಂತ ಸ್ವಾಗತಾರ್ಹ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಮಾತನಾಡಿ, ಮೂಡಬಿದ್ರೆಯಲ್ಲಿ ನಡೆಯುವ ಯಕ್ಷಗಾನ, ಗಣೇಶೋತ್ಸವ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿರುವುದನ್ನು ಕಂಡಿದ್ದೇವೆ. ಸಂಘಟನೆಗಳಿoದ ಯಕ್ಷಗಾನಕ್ಕೆ ಶಕ್ತಿ ತುಂಬುವ ಕಾರ್ಯ ನಡೆದಿರುವುದು ಸಂತೋಷ ತಂದಿದೆ, ಹಿಂದೆ ಯಕ್ಷಗಾನ ಕಲಾವಿದರೆಂದರೆ ಬಹು ಸಂಕಷ್ಟದ ದಿನಗಳಿದ್ದವು, ಆದರೆ ಇಂದು ಕಲೆಯ ಬೆಳೆವಣಿಗೆಯಾಗಿದೆ. ಯಕ್ಷಗಾನಕ್ಕೆ ಹಾಗೂ ಕಲಾವಿದರಿಗೆ ಒಳ್ಳೆಯ ದಿನಗಳು ಬಂದಿವೆ ಎಂದರು.

ಕಾರ್ಯಕ್ರಮದಲ್ಲಿ ತೆಂಕುಬಡಗು ತಿಟ್ಟಿನ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತರಾದ ಸುಪ್ರಸಿದ್ಧ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು.
ಮೂಡಬಿದ್ರೆಯ ಧನಲಕ್ಷ್ಮಿ ಸಮೂಹ ಸಂಸ್ಥೆಗಳ ಮಾಲೀಕ ಕೆ. ಶ್ರೀಪತಿ ಭಟ್, ಉದ್ಯಮಿ ಪುನೀತ್ ಕಟ್ಟೆಮಾರ್, ಯಕ್ಷ ಸಂಗಮದ ಸಂಚಾಲಕ ಶಾಂತರಾಮ ಕುಡ್ವ, ಅಧ್ಯಕ್ಷ ಸುದರ್ಶನ ಎಂ. ಮೊದಲಾದವರು ಉಪಸ್ಥಿತರಿದ್ದರು.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು