ಹಿಂದೂ ಮುಖಂಡನ ಹಲ್ಲೆ ಪ್ರಕರಣದ ಆರೋಪಿ ಮೇಲೆ ತಲವಾರ್ ದಾಳಿಗೆ ಯತ್ನ : ಎಫ್ಐಆರ್ ದಾಖಲು

ಉಳ್ಳಾಲ : ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡನ ಮೇಲೆ ಹಲ್ಲೆ ನಡೆಸಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಂದಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳ ತಂಡ ತಲವಾರ್ ದಾಳಿ ನಡೆಸಲು ಯತ್ನಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆ.ಸಿ.ರೋಡ್- ಉಚ್ಚಿಲದ ಪೆಟ್ರೋಲ್ ಬಂಕ್ ಎಂಬಲ್ಲಿ ನಡೆದಿದ್ದು, ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ಠಾಣಾಧಿಕಾರಿಯ ಎದುರೇ ಹಿಂದೂ ಮುಖಂಡನಿಗೆ ಹಲ್ಲೆ ನಡೆಸಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿ ಆಸೀಫ್ ಮೇಲೆ ಹಲ್ಲೆ‌ಗೆ ಯತ್ನಿಸಲಾಗಿದೆ. ಎಂಟು ಮಂದಿ ಹೆಲ್ಮಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಆಸಿಫ್ ಪ್ರಯಾಣಿಸುತ್ತಿದ್ದ ಕಾರನ್ನು ನವೆಂಬರ್ 7 ರಂದು ರಾತ್ರಿ 9.30ರ ಸುಮಾರಿಗೆ ಹಿಂಬಾಲಿಸಿದ್ದರು.

ಉಚ್ಚಿಲದ ಪೆಟ್ರೋಲ್ ಬಂಕ್ ಸಮೀಪ ಕಾರನ್ನು ಅಡ್ಡಗಟ್ಟಿದ್ದರು. ಎಲ್ಲರ ಕೈಯಲ್ಲೂ ಮೊಟ್ಟೆ ಹಾಗು ತಲವಾರುಗಳಿದ್ದವು. ದುಷ್ಕರ್ಮಿಗಳು ಬೀಸಿದ ತಲವಾರು ಆಸೀಫ್ ಇದ್ದ ಕಾರಿಗೆ ತಗುಲಿದ್ದು, ಗಾಜಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೈಕುಗಳಲ್ಲಿದ್ದ ಆಗಂತುಕರು ಹಿಂಬಾಲಿಸುತ್ತಿರುವುದು ಗೊತ್ತಾದ ಬಳಿಕ ಆಸೀಫ್ ಇದ್ದ ಕಾರಿನ ಚಾಲಕ ವೇಗವಾಗಿ ವಾಹನ ಚಲಾಯಸಿದ್ದ. ತಲಪಾಡಿ ಟೋಲ್‌ಗೇಟ್ ಬಳಿ ಬ್ಯಾರಿಕೇಡ್‌ಗೆ ಕಾರು ಗುದ್ದಿದೆ. ಬಳಿಕ ಮಂಜೇಶ್ವರ ಠಾಣೆಗೆ ತೆರಳಿ ಅವರು ರಕ್ಷಣೆ ಕೋರಿದ್ದರು ಎಂದೂ ಮೂಲಗಳು ತಿಳಿಸಿವೆ.

ತೊಕ್ಕೊಟ್ಟು ಓವ‌ರ್ ಬ್ರಿಡ್ಜ್ ಸಮೀಪ ಅ.17 ರಂದು ಅಪಘಾತ ಸಂಭವಿಸಿತ್ತು. ಈ ಸಂಬಂಧ ಶರತ್ ಕುಂಪಲ ಎಂಬವರ ಪರವಾಗಿ ಉಳ್ಳಾಲದ ಹಿಂದೂ ಮುಖಂಡ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ಯರ್ಥಕ್ಕೆ ತೆರಳಿದ್ದರು. ಶರತ್ ಹಾಗೂ ಕೇರಳ ಹೊಸಂಗಡಿಯ ಆಸೀಫ್ ಹಾಗೂ ಅವರಿಬ್ಬರ ಪರವಾಗಿ ಬಂದಿದ್ದವರ ನಡುವೆ ಠಾಣೆಯ ಬಳಿ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅರ್ಜುನ್ ಮೇಲೆ ಹಲ್ಲೆ ನಡೆದಿತ್ತು. ಅಂದು ರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಬಳಿಕ ಆರೋಪಿ ಆಸೀಫ್‌ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ ಗುರುವಾರ ಜಾಮೀನು ಸಿಕ್ಕಿತ್ತು. ಮಂಗಳೂರು ಜೈಲಿನಿಂದ ಬಿಡುಗಡೆಗೊಂಡು ಕಾರಿನಲ್ಲಿ ಕೇರಳದ ಹೊಸಂಗಡಿಯ ಮನೆಗೆ ತೆರಳುವಾಗ ಆತನ ಕಾರಿನ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ