ಉಡುಪಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗಾಗಿ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ 02, ಪುರಸಭೆ ಮತ್ತು ಪಟ್ಟಣ ಪಂಚಾಯತ್ಗಳಲ್ಲಿ ತಲಾ 01 ರಂತೆ ಮಾಸಿಕ ರೂ. 9000 ಗೌರವಧನದ ನೆಲೆಯಲ್ಲಿ “ನಗರ ಪುನರ್ವಸತಿ ಕಾರ್ಯಕರ್ತರ” (ಯು.ಆರ್.ಡಬ್ಲ್ಯೂ) ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 01 ರಂತೆ ಮಾಸಿಕ 9,000 ಗೌರವಧನದ ನೆಲೆಯಲ್ಲಿ “ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ” (ವಿ.ಆರ್.ಡಬ್ಲ್ಯೂ) ನೇಮಕಾತಿ ಮಾಡಿಕೊಳ್ಳಲು ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿ.ಆರ್.ಡಬ್ಲ್ಯೂ ನೇಮಕಾತಿಗಾಗಿ ಬಾಕಿ ಇರುವ ಗ್ರಾಮ ಪಂಚಾಯತ್ಗಳ ವಿವರ: ಉಡುಪಿ ತಾಲೂಕಿನ ಕಡೆಕಾರು ಹಾಗೂ ಮಣಿಪುರ, ಬ್ರಹ್ಮಾವರ ತಾಲೂಕಿನ 38 ಕಳತ್ತೂರು ಹಾಗೂ ಹೆಗ್ಗುಂಜೆ, ಹೆಬ್ರಿ ತಾಲೂಕಿನ ಹೆಬ್ರಿ, ಶಿವಪುರ ಹಾಗೂ ಬೆಳ್ವೆ, ಕಾಪು ತಾಲೂಕಿನ ಬೆಳಪು, ಮಜೂರು ಹಾಗೂ ಹೆಜಮಾಡಿ, ಕುಂದಾಪುರ ತಾಲೂಕಿನ ಕೆರಾಡಿ ಮತ್ತು ಕಾರ್ಕಳ ತಾಲೂಕಿನ ಕಲ್ಯಾ. ಯು.ಆರ್.ಡಬ್ಲ್ಯೂ ನೇಮಕಾತಿಗಾಗಿ ಖಾಲಿ ಇರುವ ಸ್ಥಳೀಯ ಸಂಸ್ಥೆ – ಕುಂದಾಪುರ ಪುರಸಭೆ.
ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರುವ, ಶೇ.40 ಕ್ಕಿಂತ ಮೇಲ್ಪಟ್ಟು ವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಾಧಿಕಾರದಿಂದ ನೀಡಲ್ಪಟ್ಟಿರುವ ವಿಕಲಚೇತನರ ವಿಶಿಷ್ಟ ಗುರುತುಚೀಟಿ (ಯು.ಡಿ.ಐ.ಡಿ ಕಾರ್ಡ್) ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವ ವಿಕಲಚೇತನರು ತಮ್ಮ ವಾಸಸ್ಥಳ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯತ್ ಅಥವಾ ಗ್ರಾಮ ಪಂಚಾಯತ್ನಿಂದ ಪಡೆದ ವಾಸ್ತವ್ಯ ದೃಢೀಕರಣ ಪತ್ರ ಹಾಗೂ 3 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಇವರಿಗೆ ಮೇ 20ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಮುಖ್ಯಸ್ಥರ ಆಯ್ಕೆ ಸಮಿತಿ ಮೂಲಕ ನಗರ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುವುದು.