ಫೆ.8ರಂದು “ಸ್ವರಸಾನಿಧ್ಯ” ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವ

ಮಂಗಳೂರು : ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ “ಸ್ವರ ಸಾನಿಧ್ಯ” ರಾಷ್ಟ್ರೀಯ ಮಟ್ಟದ ಯುವ ಸಂಗೀತೋತ್ಸವ ಹಾಗೂ ದೇಶದ ಖ್ಯಾತ ಸಂಗೀತ ಕಲಾವಿದರ ಸಂಗೀತ ಕಾರ್ಯಕ್ರಮ ಫೆಬ್ರವರಿ 8ರಂದು ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭ‌ಗೊಳ್ಳಲಿದ್ದು ರಾತ್ರಿ 8:30ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀನಿವಾಸ್ ನಾಯಕ್ ಇಂದಾಜೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಬೆಳಿಗ್ಗೆ 8.40ರಿಂದ 9.30 ರವರೆಗೆ ಶ್ರೀಮತಿ ವಿಭಾ ಎಸ್. ನಾಯಕ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬಲಾದಲ್ಲಿ ವಿಕ್ಷೇಶ್ ಪ್ರಭು ಹಾಗೂ ಹಾರ್ಮೋನಿಯಂ‌ನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಲಿದ್ದಾರೆ.
ಬೆಳಿಗ್ಗೆ 9.40 ರಿಂದ 10.30 ರವರೆಗೆ ಮೂಡುಬಿದಿರೆಯ ಸ್ವಯಂ ಪ್ರಕಾಶ್‌ ಪ್ರಭು (ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯ) ಅವರಿಂದ ಕೊಳಲು ವಾದನ.
ಬೆಳಿಗ್ಗೆ 10.40 ರಿಂದ 11.30ರವರೆಗೆ ಆತ್ರೇಯಾ ಗಂಗಾಧರ್ ಅವರಿಂದ ಗಾಯನ, 11.40ರಿಂದ ಕಲಾಸಾಧನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.

ಬಳಿಕ ಮಾತಾಡಿದ ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಅವರು, “ಸಂಜೆ 5 ಗಂಟೆಗೆ ಹಿಂದೂಸ್ತಾನಿ ಸಂಗೀತ ಕಛೇರಿ ಉದ್ಘಾಟನೆಗೊಳ್ಳಲಿದೆ. ಸಂಜೆ 5.45ರಿಂದ 7ರವರೆಗೆ ಬಸವರಾಜ ವಂದಲಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ, 7.15 ರಿಂದ 8.30ವರೆಗೆ ಕೋಲ್ಕತ್ತಾದ ಅರಣ್ಯ ಚೌಧರಿ ಅವರಿಂದ ಸಂತೂರ್ ವಾದನ ಕಛೇರಿ ನಡೆಯಲಿದೆ ಅವರು ಮುಂಬೈ, ಬನಾರಸ್, ದೆಹಲಿ ಹಾಗೂ ಜರ್ಮನಿ, ಫ್ರಾನ್ಸ್, ಪೋಲೆಂಡ್ ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿರುವ ಖ್ಯಾತ ಸಂತೂರ್‌ ವಾದಕರಾಗಿದ್ದಾರೆ“ ಎಂದರು.

ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂಗೀತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಪ್ರಾಂಶುಪಾಲೆ ಮಾಲಿನಿ ಹೆಬ್ಬಾರ್ ಉಪಸ್ಥಿತರಿದ್ದರು.

Related posts

ಬಸ್ಸು ಮಾಲಕರಿಂದ ಟೋಲ್ ಲೂಟಿ ವಿರುದ್ಧ ಪ್ರತಿಭಟನೆ

ಫೆಬ್ರವರಿ 8ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ವತಿಯಿಂದ ₹ 25ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ : ಯಶ್ಪಾಲ್ ಸುವರ್ಣ

ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ಅವರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ