ಏಕಾಏಕಿ ಉಕ್ಕಿಹರಿದ ನೇತ್ರಾವತಿ, ಮೃತ್ಯುಂಜಯ ನದಿಗಳು – ಉಗಮಸ್ಥಾನದಲ್ಲಿ ಭೂಕುಸಿತದ ಶಂಕೆ

ಬೆಳ್ತಂಗಡಿ : ಕಳೆದ ಒಂದು ವಾರಗಳಿಂದ ಮಳೆ ಕೊಂಚ ಕಡಿಮೆಯಾಗಿ ಶಾಂತವಾಗಿದ್ದ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳು ಏಕಾಏಕಿ ನೀರು ಉಕ್ಕಿ ಹರಿದ ಪರಿಣಾಮ ಬೆಳ್ತಂಗಡಿ ತಾಲೂಕಿನಾದ್ಯಂತ ಸೋಮವಾರ ಸಂಜೆ ಪ್ರವಾಹ ಪರಿಸ್ಥಿತಿ ಕಂಡು ಬಂದಿದೆ. ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಉಗಮ ಸ್ಥಾನದಲ್ಲಿ ಭಾರಿ ಮಳೆಯಾಗಿರುವ ಸಾಧ್ಯತೆ ಇದ್ದು ನದಿಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ.

ಜುಲೈನಲ್ಲಿ ಇಲ್ಲಿ ಮಹಾಪ್ರವಾಹ ಕಂಡು ಬಂದಿದೆ. ಆದರೆ ಮಳೆ ಇಲ್ಲದಿದ್ದರೂ ಈ ನದಿಗಳು ಮತ್ತೆ ಸೋಮವಾರ ಪ್ರವಾಹದ ಭೀತಿ ಸೃಷ್ಟಿಸಿದೆ. ಬೆಳ್ತಂಗಡಿ ತಾಲೂಕಿನ ಹೆಚ್ಚಿನೆಡೆಗಳಲ್ಲಿ ಸೋಮವಾರ ಮಧ್ಯಾಹ್ನ ಸಾಮಾನ್ಯ ಮಳೆಯಾಗಿತ್ತು. ಆದರೆ ಸಂಜೆ 5ಗಂಟೆ ವೇಳೆಗೆ ನದಿಗಳು ಏಕಾಏಕಿ ತುಂಬಿ ಹರಿಯತೊಡಗಿದೆ.

ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದ ಕಡೆಗಳಲ್ಲಿ ನದಿನೀರು ದಡಮೀರಿ ಹರಿದಿತ್ತು. ಹೆಚ್ಚಿನ ತೋಟಗಳಿಗೆ ಪ್ರವಾಹದ ನೀರು ನುಗ್ಗಿದೆ. ಈ ವರ್ಷ ಎರಡು ನದಿಗಳಲ್ಲಿ ಹರಿದ ಅತಿ ಹೆಚ್ಚಿನ ನೀರಿನ ಪ್ರಮಾಣವಾಗಿದೆ ಎನ್ನಲಾಗಿದೆ. ಮಳೆ ಇಲ್ಲದಿದ್ದರೂ ಎರಡೂ ನದಿಗಳಲ್ಲಿ ಪ್ರವಾಹದಂತೆ ನೀರು ಹರಿದುಬರುವುದನ್ನು ಕಂಡು ನದಿ ಪಾತ್ರಗಳಲ್ಲಿ ವಾಸಿಸುವವರು ಜನರು ಭೀತಿಗೊಳಗಾಗಿದ್ದಾರೆ. ಹಲವರು ತಮ್ಮ ವಾಸ್ತವ್ಯವನ್ನೇ ಬದಲಿಸಿದ್ದರು. ರಾತ್ರಿ 8:30ರ ಹೊತ್ತಿಗೆ ನದಿ ನೀರು ಇಳಿಕೆಯಾಗತೊಡಗಿದೆ ಎಂದು ಹೇಳಲಾಗುತ್ತಿದೆ.

ನದಿಗಳಲ್ಲಿ ಸಂಪೂರ್ಣ ಕೆಸರುಮಯ ನೀರು ಹರಿಯತೊಡಗಿದೆ. ನೀರಿನ ವೇಗವೂ ತೀರಾ ಹೆಚ್ಚಾಗಿತ್ತು. ನದಿನೀರಿನಲ್ಲಿ ದೊಡ್ಡದೊಡ್ಡ ಮರಗಳು ತೇಲಿ ಹೋಗುತ್ತಿರುವುದನ್ನು ಗಮನಿಸಿದರೆ ನದಿಗಳ ಉಗಮ ಪ್ರದೇಶದಲ್ಲಿ ಅರಣ್ಯದ ನಡುವೆ ಭೂಕುಸಿತಗೊಂಡಿರುವ ಅನುಮಾನ ವ್ಯಕ್ತವಾಗಿದೆ. ಸವಣಾಲಿನಲ್ಲಿ ನದಿಯಲ್ಲಿ ಮಣ್ಣು ಮಿಶ್ರಿತ ಕಪ್ಪುಬಣ್ಣದ ನೀರು ಹರಿದಿದ್ದು ನದಿ ನೀರು ದುರ್ಗಂಧದಿಂದ ಕೂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಿತ್ತಬಾಗಿಲು ಗ್ರಾಮದ ಗಣೇಶನಗರ, ಚಾರ್ಮಾಡಿ ಸೇರಿದಂತೆ ಹಲವು ಅಪಾಯಕಾರಿ ಪ್ರದೇಶಗಳಲ್ಲಿ ಶಾಲಾ ಮಕ್ಕಳನ್ನು ಸ್ಥಳೀಯರು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಿದ್ದಾರೆ. ಇಲ್ಲಿನ ಹಲವಾರು ತೋಡು, ಕಿರು ಸೇತುವೆಗಳು, ಕಿಂಡಿ ಅಣೆಕಟ್ಟುಗಳು ಜಲಾವೃತವಾಗಿತ್ತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ