ಮಾಹೆಯ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಅಧ್ಯಯನ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌‌ನ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಕುರಿತ ಕ್ಷೇತ್ರಾಧ್ಯಯನವು ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ನಡೆಯಿತು. ಕೊರಗ ಭಾಷಾ ತಜ್ಞ, ಲೇಖಕರಾದ ಪಾಂಗಾಳ ಬಾಬು ಕೊರಗ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದು ದೆಹಲಿಯ ಅಶೋಕ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕಿ, ಲೇಖಕಿ, ಭಾಷಾಶಾಸ್ತ್ರಜ್ಞೆ ಡಾ. ಪೆಗ್ಗಿ ಮೋಹನ್‌ ಅವರು ಕ್ಷೇತ್ರಾಧ್ಯಯನವನ್ನು ನಡೆಸಿಕೊಟ್ಟರು.

‌ಬಾಬು ಕೊರಗ ಅವರು ಕೊರಗಭಾಷೆಯಲ್ಲಿ ಒಂದು ಕತೆಯನ್ನು ಹೇಳುವುದರ ಮೂಲಕ ಕ್ಷೇತ್ರಾಧ್ಯಯನಕ್ಕೆ ಅನುವು ಮಾಡಿಕೊಟ್ಟರು. ಪೆಗ್ಗಿ ಮೋಹನ್‌ ಅವರು ಕೊರಗಭಾಷೆಯ ಸೂಕ್ಷ್ಮ ಸ್ವರಗಳನ್ನು ವಿಶ್ಲೇಷಿಸಿದರು. ಭಾಷೆಯ ಕ್ಷೇತ್ರಾಧ್ಯಯನದ ಸಂದರ್ಭದಲ್ಲಿ ಅನುಸರಿಸಬೇಕಾದ ಅಂಶಗಳನ್ನು ವಿವರಿಸಿದರು. ಕೊರಗ ಭಾಷೆ ಮತ್ತು ಇತರ ಭಾರತದ ಮತ್ತು ಜಗತ್ತಿನ ಇತರ ಬುಡಕಟ್ಟಿನ ಭಾಷೆಗಳ ಕುರಿತ ತೌಲನಿಕ ಅಧ್ಯಯನದ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಮಾಹೆಯ ಭಾಷಾ ವಿಭಾಗದ ಮುಖ್ಯಸ್ಥ ರಾಹುಲ್‌ ಪುಟ್ಟಿ ಅವರು ಪ್ರಸ್ತಾವನೆಯಲ್ಲಿ ಒಂದು ಭಾಷೆಯನ್ನು ಅದು ಬಳಕೆಯಲ್ಲಿರುವ ಪ್ರದೇಶದಲ್ಲಿ ಅಧ್ಯಯನ ಮಾಡುವ ಆವಶ್ಯಕತೆಯನ್ನು ವಿವರಿಸಿದರು. ಮಾಹೆಯ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಕೇಂದ್ರದ ಸಂಯೋಜಕರಾದ ಡಾ. ಪೃಥ್ವಿರಾಜ ಕವತ್ತಾರು ಕ್ಷೇತ್ರಾಧ್ಯಯನದ ಕಲಾಪವನ್ನು ಸಂಯೋಜಿಸಿದರು. ಕೊರಗ ಸಮುದಾಯದ ಸಂಘಟಕರಾದ ಸುಂದರ ಮಂಗಳೂರು, ಕುಡುಪ ಉಡುಪಿ ಅವರು ಸಹಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಭಾಷಾ ವಿಭಾಗದ ಪ್ರಾಧ್ಯಾಪಕರಾದ ಡಾ. ಅರವಿಂದ ಭಟ್‌, ಆದಿತ್ಯ ದಿವ್ಯಾ ಸಿಂಗ್‌, ಕ್ರಿಸ್ಟಾಫ್‌ ಕ್ರೋಝಿಕ್‌, ಶ್ವೇತಾ ದೇಶಪಾಂಡೆ, ಅಮೃತರಾಜ್‌ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ರಾಮಮಂದಿರದಲ್ಲಿ ಕದ್ದ ರಾಮನ ಮೂರ್ತಿಗಳನ್ನು ಹೊಳೆಬದಿಯಲ್ಲಿ ಬಿಟ್ಟುಹೋದ ಕಳ್ಳರು!

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ಹೊಸ ಕೋಚ್‌ಗಳಲ್ಲಿ ಲೋಪ : ದೂರು ನಿವಾರಣೆಗೆ ಸಚಿವರನ್ನು ಭೇಟಿಯಾದ ಸಂಸದ ಕೋಟ

ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೆಎಂಸಿಯಲ್ಲಿ ಬಾಲ್ಯದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ