ಬ್ರಹ್ಮಾವರ ಕೃಷಿ ಡಿಪ್ಲೋಮ ಜೊತೆಗೆ ಕೃಷಿ ಕಾಲೇಜು ಆರಂಭಿಸಲಿ : ಯಶ್‌ಪಾಲ್ ಸುವರ್ಣ ಆಗ್ರಹ

ಉಡುಪಿ : ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಸ್ಥಳೀಯ ಜನತೆಯ ಒಕ್ಕೊರಲ ಬೇಡಿಕೆಯಾಗಿದ್ದ ಕೃಷಿ ಮಹಾವಿದ್ಯಾಲಯ ಆರಂಭಿಸುವ ಮನವಿಯನ್ನು ಪರಿಗಣಿಸದೆ ರಾಜ್ಯ ಸರ್ಕಾರ ಡಿಪ್ಲೋಮ ಪದವಿಯನ್ನು ಪುನರಾರಂಭಿಸಲು ಆದೇಶ ನೀಡಿದ್ದು, ಸರಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಈಗಾಗಲೇ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೃಷಿ ವಿಭಾಗದಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ, ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಸಂಘಟನೆಗಳು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿಯವರು ಬ್ರಹ್ಮಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಕೃಷಿ ಕಾಲೇಜು ಆರಂಭಕ್ಕೆ ಮನವಿ ಮಾಡಿದ್ದೇನೆ.

2022ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಡಿಪ್ಲೋಮ ಕೋರ್ಸ್‌ಗಳನ್ನು ಮುಂದುವರೆಸದಂತೆ ಆದೇಶ ನೀಡಿದೆ. ಡಿಪ್ಲೋಮ ಕೋರ್ಸಿನ ಮಾನ್ಯತೆಯ ಗೊಂದಲ, ಉದ್ಯೋಗಾವಕಾಶ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಪ್ಲೋಮ ಕೋರ್ಸಿಗೆ ಪ್ರವೇಶ ಪಡೆಯಲು ಅಸಕ್ತಿ ತೋರುತ್ತಿಲ್ಲ.

ರಾಜ್ಯ ಸರಕಾರ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಆರಂಭಿಸಲು ಪೂರಕವಾಗಿರುವ 300 ಎಕ್ರೆ ಜಾಗದೊಂದಿಗೆ ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಹೊಂದಿದ್ದು, ಸರ್ಕಾರಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಿಲ್ಲದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸಿ ಕರಾವಳಿ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹ ಮಾಡುವುದಾಗಿ ತಿಳಿಸಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ