ಕೊಂಕಣಿ ಅಕಾಡಮಿ ನೂತನ ಅಧ್ಯಕ್ಷರಾಗಿ ಸ್ಟ್ಯಾನಿ ಅಲ್ವಾರಿಸ್ ಅಧಿಕಾರ ಸ್ವೀಕಾರ

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮಂಗಳೂರಿನ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಕೊಂಕಣಿ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಭಾಷೆಯ ಮೂಲಕ ವ್ಯವಹಾರ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗುವಂತೆ ಅಕಾಡಮಿಯನ್ನು ಬಳಸಿಕೊಳ್ಳುವುದು ಮುಖ್ಯ ಎಂದರು. ಅಕಾಡಮಿಗಳು ರಾಜಕೀಯ ಸಂಸ್ಥೆ ಅಲ್ಲ. ಭಾಷಾಭಿವೃದ್ಧಿಯ ಜತೆಗೆ ನಾನಾ ಭಾಷಿಗರ ನಡುವೆ ಸೌಹಾರ್ದ ಸಾಧಿಸುವ ಕೆಲಸ ಆಗಬೇಕು ಎಂದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ, ಕೊಂಕಣಿ ಭಾಷೆ, ಸಾಹಿತ್ಯ, ಸಂಶೋಧನೆಗೆ ಸಂಬಂಧಿಸಿದ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರೊಂದಿಗೆ, ಅಕಾಡಮಿ ಸದಸ್ಯರೊಂದಿಗೆ ಚರ್ಚಿಸಿ, ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಶುಭ ಹಾರೈಸಿದರು.

ಅಕಾಡಮಿಯ ಸದಸ್ಯರಾದ ಡಾ. ಪ್ರಶಾಂತ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಸಮರ್ಥ ಭಟ್, ಸುನೀಲ್ ಸಿದ್ದಿ ಯಲ್ಲಾಪುರ, ಜೇಮ್ಸ್ ಲೋಪೇಸ್, ದಯಾನಂದ ಮಡ್ಕೇಕರ್ ಕಾರ್ಕಳ, ಪ್ರವೀಣ್ ಪಿಂಟೋ ಚಿಕ್ಕಮಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್., ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸದಸ್ಯರಾದ ಎ.ಸಿ. ವಿನಯರಾಜ್, ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

ವಿಕ್ಟರ್ ಮಥಾಯಿಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ಅಕಾಡಮಿ ರಿಜಿಸ್ಟ್ರಾರ್ ರಾಜೇಶ್ ಜಿ. ವಂದಿಸಿದರು.

ಕೊಂಕಣಿ ಭವನಕ್ಕೆ ಮೊದಲ ಅದ್ಯತೆ

ಮಂಗಳೂರಿನ ಉರ್ವ ಸ್ಟೋರ್ ಬಳಿ ಕೊಂಕಣಿ ಭವನದ ಕೆಲಸಗಳು ಸುಮಾರು 3 ಕೋ.ರೂ. ವೆಚ್ಚದಲ್ಲಿ ನಡೆದಿದ್ದು, ಇದೀಗ ಅರ್ಧಕ್ಕೆ ಸ್ಥಗಿತಗೊಂಡಿದೆ. ಕಟ್ಟಡವನ್ನು ಪೂರ್ಣಗೊಳಿಸಲು ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಒಳಾಂಗಣ ವಿನ್ಯಾಸ, ಪೀಠೋಪಕರಣ, ಪಾರ್ಕಿಂಗ್ ವ್ಯವಸ್ಥೆ, ವಿದ್ಯುದ್ಧೀಕರಣ ಮೊದಲಾದ ಕಾಮಗಾರಿಗಳಿಗೆ ಇನ್ನೂ 3 ಕೋ.ರೂ. ಅಗತ್ಯವಿದೆ. ಅಗತ್ಯ ಅನುದಾನವನ್ನು ಪಡೆದು ಈ ವರ್ಷದೊಳಗೆ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ ಎಂದು ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಹೇಳಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ