“ಜನರನ್ನು ಬೆಸೆಯಲು ಕ್ರೀಡಾಕೂಟಗಳು ಸಹಕಾರಿ” – ಕಮಿಷನರ್ ಅನುಪಮ್ ಅಗರ್ವಾಲ್

ಮಂಗಳೂರು: ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳಲಿರುವ ಮಾಜಿ ಶಾಸಕ ಬಿ.ಎ.ಮೊಯಿದೀನ್ ಬಾವಾ ಮಾಲಕತ್ವದ “ಟೀಮ್ ಬಾವಾ” ತಂಡದ ಲೋಗೋ, ಟಿ ಶರ್ಟ್ ಅನಾವರಣ ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಫೋರಮ್ ಫಿಜಾ ಮಾಲ್ ನಲ್ಲಿ ಜರುಗಿತು.

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿ, “ಕಬಡ್ಡಿ ನಮ್ಮ ದೇಶದ ಪ್ರಸಿದ್ಧ ಕ್ರೀಡೆ. ಈ ಕ್ರೀಡೆಯಲ್ಲಿ ಆಡುವವರಷ್ಟೇ ನೋಡುವವರು ಕೂಡಾ ಆಸಕ್ತಿ ಹೊಂದಿರುತ್ತಾರೆ. ಬಹಳಷ್ಟು ಥ್ರಿಲ್ ಹೊಂದಿರುವ ಈ ಕ್ರೀಡೆಯ ಆಯೋಜಕರು ಮತ್ತು ಟೀಮ್ ಬಾವಾ ತಂಡದ ಎಲ್ಲ ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜನರನ್ನು ಬೆಸೆಯಲು ಇಂತಹ ಕ್ರೀಡಾಕೂಟಗಳು ಸಹಕಾರಿ“ ಎಂದರು.

ಬಳಿಕ ಮಾತಾಡಿದ ಮೊಯಿದೀನ್ ಬಾವಾ ಅವರು, “ಮಂಗಳೂರಿನ ಜನರು ಎಲ್ಲರೂ ಒಂದೇ ತಾಯಿಯ ಮಕ್ಕಳು ಯಾವುದೇ ಜಾತಿ ಧರ್ಮದ ಬೇಧಭಾವ ನಮ್ಮಲ್ಲಿಲ್ಲ ಅನ್ನೋದನ್ನು ತೋರಿಸಲು ವೀ ಆರ್ ಯುನೈಟೆಡ್ ತಂಡವನ್ನು ಅಝ್ಫರ್ ರಝಕ್ ನೇತೃತ್ವದ ಯುವಕರು ಕಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನ್ನ ಟೀಮ್ ಬಾವಾ ತಂಡವು ಕೂಡಾ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುತ್ತಿದೆ. ಇದು ನನಗೆ ಅತ್ಯಂತ ಖುಷಿಯ ವಿಚಾರ. ಕ್ರೀಡೆಗಳು ನಮ್ಮೆಲ್ಲರನ್ನೂ ಒಗ್ಗೂಡಿಸಲಿ. ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಇಂತಹ ಕ್ರೀಡಾಕೂಟಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳೋಣ“ ಎಂದರು.

ಫಿಜಾ ಗ್ರೂಪ್ ಎಂ.ಡಿ. ಬಿ.ಎಂ.ಫಾರೂಕ್ ಮಾತನಾಡಿ, ”ಮಂಗಳೂರಿನಲ್ಲಿ ಕಬಡ್ಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವಿದೆ. ಇಲ್ಲಿ ಕ್ರೀಡೆಗೆ ಸಾಕಷ್ಟು ಅವಕಾಶಗಳಿವೆ. ಇಂತಹ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳಲಿ“ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವೀ ಆರ್ ಯುನೈಟೆಡ್ ಅಧ್ಯಕ್ಷ ಅಝ್ಫರ್ ರಝಕ್, ಕೋಶಾಧಿಕಾರಿ ಸುದೇಶ್ ಭಂಡಾರಿ, ಅನಂತ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ