ಕರಾವಳಿ ಜಿಲ್ಲೆಗಳಿಗೆ ಶೀಘ್ರವೇ ತಜ್ಞ ಪಶುವೈದ್ಯರ ನಿಯೋಜನೆ : ಸಚಿವ ಕೆ.ವೆಂಕಟೇಶ್ ಭರವಸೆ

ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ತಜ್ಞ ಪಶುವೈದ್ಯರ ಹುದ್ದೆಗಳು ಸಾಕಷ್ಟು ಖಾಲಿ ಇವೆ. ಕರಾವಳಿಗೆ ನಿಯೋಜನೆಗೊಳ್ಳುವ ಪಶುವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಇಲಾಖೆಯಲ್ಲಿ ಖಾಯಂ ನೇಮಕಾತಿಗೊಂಡ ತಜ್ಞ ವೈದ್ಯರನ್ನು ಶೀಘ್ರವೇ ಕರಾವಳಿ ಭಾಗಕ್ಕೆ ನಿಯೋಜಿಸುವ ಆಲೋಚನೆ ಇದೆ ಎಂದು ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ಕರಾವಳಿ ಜಿಲ್ಲೆಗಳಿಗೆ 22 ಮಂದಿ ತಜ್ಞ ಪಶುವೈದ್ಯರ ನಿಯೋಜನೆ ಮಾಡಲಾಗಿತ್ತು. ಆದರೆ ಇವರಲ್ಲಿ ಕೇವಲ 7 ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 15 ಮಂದಿ ಬರಲೇ ಇಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕಾತಿಗೊಂಡ ವೈದ್ಯರ ಮೇಲೆ ನಮಗೆ ಹೆಚ್ಚಿನ ನಿಯಂತ್ರಣವಿರುವುದಿಲ್ಲ. ಆದ್ದರಿಂದ ಖಾಯಂ ನೇಮಕಾತಿಗೊಂಡ ವೈದ್ಯರನ್ನು ಇಲ್ಲಿಗೆ ನಿಯೋಜಿಸುವ ಚಿಂತನೆ ಇದೆ ಎಂದರು.

ಹಿಂದೆ ಪಶುಸಖಿಯರೆಂದು ಕರೆಯಲಾಗುತಿದ್ದವರನ್ನು ಈಗ ಮೈತ್ರಿ ಕಾರ್ಯಕರ್ತೆಯರೆಂದು ಕರೆಯಲಾಗುತ್ತಿದೆ. ಮನೆ ಮನೆಗೆ ತೆರಳಿ ಅಲ್ಲಿರುವ ಜಾನುವಾರು, ಆಡು, ಕುರಿ ಹಾಗೂ ಇತರ ಪಶುಗಳ ಮಾಹಿತಿ ಸಂಗ್ರಹ, ಆರೋಗ್ಯ ಸಮಸ್ಯೆಗಳನ್ನು ನೋಡಿಕೊಳ್ಳುತಿದ್ದಾರೆ. ಇವರಿಗೆ ಇವುಗಳ ಚಿಕಿತ್ಸೆಯ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು.

ಇದು ಕೇಂದ್ರ ಸರಕಾರದ ಉತ್ತಮ ಕಾರ್ಯಕ್ರಮಗಳಲ್ಲೊಂದು. ಆದರೆ ಇವರಿಗೆ ನೀಡುವ 3,500ರೂ.ಗೌರವಧನ ಇವರು ಮಾಡುವ ಕೆಲಸಕ್ಕೆ ತೀರಾ ಕಡಿಮೆಯಾಗಿದ್ದು, ಇದನ್ನು ಕನಿಷ್ಠ 5,000ರೂ.ಗಳಿಗೆ ಏರಿಸುವಂತೆ ತಾನು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಕೇಂದ್ರದ ಗೌರವ ಧನಕ್ಕೆ ರಾಜ್ಯದ ಪಾಲನ್ನು ನೀಡುವಂತೆ ಸಲಹೆಗಳಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

ಇಲಾಖೆಯಲ್ಲಿ 700 ಮಂದಿ ಬಿ ದರ್ಜೆ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 250 ಮಂದಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಅವರನ್ನು ವಿವಿಧ ಕಡೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಪಶುಪಾಲನಾ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸರಕಾರ, ಪಶುಗಳು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂಬ ಉದ್ದೇಶದಿಂದ ಅವುಗಳ ಆರೋಗ್ಯ ಸುಧಾರಣೆಗೆ ಪಶು ವೈದ್ಯರು, ಪಶು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮೈತ್ರಿ ಕಾರ್ಯಕರ್ತ ರನ್ನು ನೇಮಕ ಮಾಡಿದೆ. ಜಿಲ್ಲೆಯಲ್ಲಿ ಪಶುಗಳ ಆರೋಗ್ಯ ಸುಧಾರಣೆಗೆ ನೇಮಕಗೊಂಡಿರುವ ಮೈತ್ರಿ ಕಾರ್ಯಕರ್ತರು ಉತ್ತಮವಾಗಿ ಸೇವೆ ನೀಡಬೇಕು. ಈ ಮೂಲಕ ರೈತ ಸಮುದಾಯ ಸೇರಿದಂತೆ ಹೈನುಗಾರರು ಇದರ ಲಾಭ ಪಡೆಯಬೇಕು ಎಂದು ಕರೆ ನೀಡಿದರು.

ಪಶುಸಖಿಯರು ಅಥವಾ ಮೈತ್ರಿ ಕಾರ್ಯಕರ್ತರಿಗೆ ಈಗಾಗಲೇ ಮೂರು ತಿಂಗಳ ತರಬೇತಿ ನೀಡಲಾಗಿದೆ. ಇವರು ನಗರ ಹಾಗೂ ಗ್ರಾಮೀಣ ಭಾಗದ ತಮ್ಮ ಪಶು ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ, ಜಾನುವಾರುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕಿ, ಆರೋಗ್ಯದಲ್ಲಿ ಸಮಸ್ಯೆಗಳಿದ್ದಲ್ಲಿ ಅಗತ್ಯ ಸಲಹೆ ಸೂಚನೆ, ಚಿಕಿತ್ಸೆಯನ್ನು ನೀಡಬೇಕು ಎಂದರು.

ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಸರಕಾರ ಇನ್ನೂ ಹೆಚ್ಚಿನ ಶಕ್ತಿ ತುಂಬಿ, ಪ್ರೋತ್ಸಾಹ ನೀಡಬೇಕು. ಅಲ್ಲದೇ ಜಿಲ್ಲೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹಾಗೂ ಸಿಬ್ಬಂದಿಗಳ ಖಾಲಿ ಹುದ್ದೆಗಳನ್ನು ಆದಷ್ಟು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರಾಣಿಗಳ ಜನನ ನಿಯಂತ್ರಣ ಹಾಗೂ ಹುಚ್ಚುರೋಗ ನಿರೋಧಕ ಲಸಿಕೆ ಮಾಹಿತಿ ಒಳಗೊಂಡ ಕರಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ಜಿಲ್ಲೆಯ ಪಶುಪಾಲನಾ ಇಲಾಖೆಯ ಕೆಲವು ಕಾರ್ಯಕ್ರಮಗಳ ಬಗ್ಗೆ ಕಿರುಚಿತ್ರಣ ಪ್ರದರ್ಶಿಸಲಾಯಿತು. ಮೈತ್ರಿ ಕಾರ್ಯಕರ್ತರಿಗೆ ಮೈತ್ರಿ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಉಡುಪಿ, ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿ.ಪಂನ ಉಪ ಕಾರ್ಯದರ್ಶಿ ಶ್ರೀನಿವಾಸ ರಾವ್, ರಾಜ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಮಂಜುನಾಥ್ ಎಸ್ ಪಾಳೇಗಾರ್, ಪಶು ವೈದ್ಯಕೀಯ ಪರಿಷತ್ತಿನ ನಿರ್ದೇಶಕ ಡಾ.ಸುಶಾಂತ್ ರೈ, ಇಲಾಖೆಯ ಮಂಗಳೂರು ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Related posts

ಮಲ್ಪೆ ಆದಿ ಉಡುಪಿ ಹೆದ್ದಾರಿ ಕಾಮಗಾರಿ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಮಂಗಳೂರಿನಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕೇರಳದಿಂದ ಕೊಲ್ಲೂರಿಗೆ ಹೊರಟಿದ್ದ ಟಿಟಿ ವಾಹನ ಪಲ್ಟಿ – ಹಲವರಿಗೆ ಗಾಯ