ಕುಂಭಮೇಳಕ್ಕೆ ವಿಶೇಷ ರೈಲು – ಇಂದು ಪೇಜಾವರ ಶ್ರೀಗಳಿಂದ ಚಾಲನೆ

ಉಡುಪಿ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರನ್ನು ಸೋಮವಾರ ಉಡುಪಿ ರೈಲು ನಿಲ್ದಾಣದಿಂದ ಕರೆದೊಯ್ಯುವ ಮಹಾಕುಂಭ ಸ್ಪೆಷಲ್ ರೈಲಿಗೆ (ರೈಲು ನಂ.01192) ಎರಡು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿಗಮ ನಿರ್ಧರಿಸಿದೆ.

ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಟಿಕೆಟ್‌ಗಾಗಿ ಜನರ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಕ್ತರನ್ನು ಹೊತ್ತ ಈ ರೈಲು ಇಂದು (ಫೆಬ್ರವರಿ.17) ಅಪರಾಹ್ನ 12:30ಕ್ಕೆ ಉಡುಪಿಯಿಂದ ಪ್ರಯಾಣ ಬೆಳೆಸಲಿದೆ. ಈ ರೈಲು ಬುಧವಾರ ಮುಂಜಾನೆ ಪ್ರಯಾಗ್‌ರಾಜ್ ತಲುಪಲಿದೆ. ಮರು ಪ್ರಯಾಣದಲ್ಲಿ ಗುರುವಾರ ಹೊರಟು ಈ ರೈಲು ಶನಿವಾರ ಸಂಜೆ 6:10ಕ್ಕೆ
ಉಡುಪಿ ತಲುಪಲಿದೆ.

ರೈಲು ಇದೀಗ ಒಟ್ಟು 22 ಕೋಚ್‌ಗಳೊಂದಿಗೆ ಸಂಚರಿಸಲಿದೆ. ಇವುಗಳಲ್ಲಿ ಒಂದು 2ಟಯರ್ ಎಸಿ ಕೋಚ್‌, ಐದು ಟಯ‌ರ್ ಎಸಿ ಕೋಚ್, 12 ಸ್ಲೀಪರ್ ಕೋಚ್, 2 ಜನರಲ್ ಕೋಚ್ ಹಾಗೂ 2 ಎಸ್‌ಎಲ್‌ಆ‌ರ್ ಕೋಚ್‌ಗಳನ್ನು ಹೊಂದಿರುತ್ತದೆ.

ಈ ರೈಲಿಗೆ ರಾಜ್ಯ ಕರಾವಳಿಯಲ್ಲಿ ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಕುಮಟಾ, ಗೋಕರ್ಣ ರೋಡ್, ಕಾರವಾರಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಅತ್ಯಂತ ಕಡಿಮೆ ದರದಲ್ಲಿ ಕುಂಭಮೇಳಕ್ಕೆ ಹೋಗಿ ಬರುವ ರೈಲಿಗೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಅಪರಾಹ್ನ 12 ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ – ಕರ್ನಾಟಕ ಯುವರಕ್ಷಣಾ ವೇದಿಕೆ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ