ಜ.10-12ರಂದು ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025

ಮಂಗಳೂರು : “ಸೌತ್ ಇಂಡಿಯಾ ಮಾಸ್ಟರ್ ಅಥ್ಲೆಟಿಕ್ಸ್ ಆಸೋಸಿಯೇಶನ್ ವತಿಯಿಂದ ಜನವರಿ 10ರಿಂದ 12ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025 ಹಮ್ಮಿಕೊಂಡಿದ್ದು ಕ್ರೀಡಾಕೂಟದಲ್ಲಿ ದೇಶ ವಿದೇಶದ ಸುಮಾರು 2000 ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದರ ಪೂರ್ವ ತಯಾರಿಯ ಮೇಲ್ವಿಚಾರಣೆಯನ್ನು ಹಾಗೂ ನಿರ್ವಹಣೆಯನ್ನು ನಮ್ಮ ಸಂಘದ ಗೌರವಾಧ್ಯಕ್ಷರಾದ ಐವನ್ ಡಿ’ಸೋಜ, ಇವರು ನಿರ್ವಹಿಸಲಿದ್ದಾರೆ” ಎಂದು ಸಂಘಟನೆಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಸುಮಾರು 500 ಕ್ರೀಡಾಪಟುಗಳಿಗೆ ಉಚಿತ ವಸತಿ ಹಾಗೂ ಎಲ್ಲಾ ಕ್ರೀಡಾಪಟುಗಳಿಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯ ಪೂರ್ವ ತಯಾರಿಯನ್ನು ಈಗಾಗಲೇ ಮಾಡಲಾಗಿದೆ. ಜ.9ರ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಚೆಸ್ಟ್ ನಂಬರ್, ಕ್ರೀಡಾ ಸಮವಸ್ತ್ರ ಹಾಗೂ ಮೂರು ದಿನಗಳ ಉಪಹಾರ ಮತ್ತು ಮಧ್ಯಾಹ್ನ ಭೋಜನದ ಚೀಟಿಯನ್ನೂ ಮಂಗಳಾ ಕ್ರೀಡಾಂಗಣದಲ್ಲಿ ವಿತರಿಸಲಾಗುತ್ತದೆ. ಜ.10 ರಂದು ಮುಂಜಾನೆ 7 ಗಂಟೆಗೆ ಮೊದಲ ಸ್ಪರ್ಧೆಗಳು ಪ್ರಾರಂಭಗೊಳ್ಳಲಿದೆ. ಈ ಕೀಡಾಕೂಟದ ಉದ್ಘಾಟನಾ ಕಾರ್ಯಕ್ರಮವು ಜ.10:30ಕ್ಕೆ ಜರುಗಲಿದೆ ಎಂದರು.

ಕ್ರೀಡಾಕೂಟವನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ದೀಪವನ್ನು ಬೆಳಗಿಸಿ ಕ್ರೀಡಾ ಪ್ರಮಾಣ ವಚನದ ಮೂಲಕ ಚಾಲನೆಯನ್ನು ನೀಡಲಿದ್ದಾರೆ. ಹಾಗೂ ವಿಶೇಷ ಅತಿಥಿಗಳಾಗಿ ಜಿಲ್ಲಾಧಿಕಾರಿಗಳು, ಮಂಗಳೂರು ಜಿಲ್ಲಾ ಪೊಲೀಸ್ ಕಮಿಷನರ್ ಹಾಗೂ ಮಂಗಳೂರು ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಅನ್ವರ್ ಕಟಪಾಡಿ, ರವಿರಾಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

ಉಡುಪಿ ನಗರದ ಅಭಿವೃದ್ಧಿ – ಸಮಸ್ಯೆ ಬಗ್ಗೆ ಚರ್ಚೆ; ಉಡುಪಿ ಶಾಸಕರು, ನಗರಸಭೆ ಅಧ್ಯಕ್ಷರೊಂದಿಗೆ ಪತ್ರಕರ್ತಕರ ಸಂವಾದ

ಪೆಟ್ರೋಲ್ ಬಂಕ್ ಮೇಲ್ವಿಚಾರಕನಿಂದ ವಂಚನೆ ಆರೋಪ; ದೂರು ದಾಖಲು

ಈಜಲು ತೆರಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಮುದ್ರಪಾಲು