ಕದಳೀಪ್ರಿಯ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ಮದುಮಕ್ಕಳ ಜಾತ್ರೆ ವಿಜೃಂಭಣೆಯಿಂದ ಸಂಪನ್ನ

ಉಡುಪಿ : ಜಿಲ್ಲೆಯ ಪೆರ್ಡೂರು ಕದಳೀಪ್ರಿಯ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ಮದುಮಕ್ಕಳ ಜಾತ್ರೆ ವಿಜೃಂಭಣೆಯಿಂದ ಸಂಪನ್ನಗೊಂಡುತು. ಈ ವಾರ್ಷಿಕ ಜಾತ್ರೆಗೆ ಉಡುಪಿ ಜಿಲ್ಲೆ ಮಾತ್ರವಲ್ಲದೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸುಮಾರು ಒಂದು ಸಾವಿರ ವರ್ಷಗಳಿಂದಲೂ ಭಕ್ತರಿಂದ ಬಾಳೆಹಣ್ಣಿನ ಸೇವೆ ಇಲ್ಲಿ ನಡೆದು ಬರುತ್ತಿದ್ದು ತಮ್ಮ ಇಷ್ಟಾರ್ಥ ಸಿದ್ಧಿ ಸಂಕಲ್ಪಗಳಿಗೆ ಬಾಳೆಹಣ್ಣಿನ ಸೇವೆ ಸಲ್ಲಿಸುವುದು ಇಲ್ಲಿ ವಿಶೇಷ. ಅನಾರೋಗ್ಯದ ನಿವಾರಣೆಗೆ ಸಾವಿರ ಬಾಳೆಹಣ್ಣು, 500 ಬಾಳೆಹಣ್ಣು, ದಿನಕ್ಕೊಂದು ಬಾಳೆಹಣ್ಣು, ಸಿಬ್ಲ ಹಣ್ಣು ಹೀಗೆ ಬಾಳೆಹಣ್ಣಿನ ಹರಕೆ ಸೇವೆ ನಡೆಯುತ್ತಿದೆ.

ಇನ್ನು ಆಷಾಢ ಕಳೆದು ಬರುವ ಸಿಂಹ ಮಾಸ ಹೊಸ ಮದುಮಕ್ಕಳಿಗೆ ವಿಶೇಷ. ಈ ವರ್ಷದಲ್ಲಿ ಮದುವೆಯಾದ ಮದುಮಕ್ಕಳು ಸಿಂಹಸಂಕ್ರಮಣದಂದು ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಮೊದಲಿನಿಂದ‌ಲೂ ನಡೆದು ಬರುತ್ತಿದೆ. ಮದುಮಗ ತನ್ನ ಮನೆ ಹಿರಿಯರೊಂದಿಗೆ ತನ್ನ ಮಡದಿಯನ್ನು ಕರೆದೊಯ್ಯಲು ಬರುವ ಹಾಗೂ ಮದುಮಗಳು ಗಂಡನ ಮನೆಗೆ ಹೋಗುವ ಮುನ್ನ ತಮ್ಮ ಹೆತ್ತವರೊಂದಿಗೆ ಬಂದು ಸೇರುವ ತಾಣ ಇದಾಗಿದ್ದು, ಇಲ್ಲಿ ಹೊಸ ದಂಪತಿ ಶ್ರೀ ಸ್ವಾಮಿಯನ್ನು ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಇದು ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು