ಉಡುಪಿ : ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲಿ ಗಾಂಧೀಜಿಯವರು ಅಹಿಂಸಾವಾದ ಪ್ರತಿಪಾದನೆ ವೇಳೆ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಅಹಿಂಸೆ ಬೋಧಿಸಿದ್ದಾನೆ ಎಂದಿದ್ದರು. ಅದನ್ನೇ ದೇಶದ ಮೊದಲ ಪ್ರಧಾನಿ ಅನುಸರಿಸಿ ನಮ್ಮ ಸೈನ್ಯಕ್ಕೆ ಬಲ ತುಂಬಲಿಲ್ಲ. ಹೀಗಾಗಿ ಚೀನದ ಆಕ್ರಮಣ ಎದುರಿಸಲು ವಿಫಲರಾದೆವು. ವಾಸ್ತವದಲ್ಲಿ ಶ್ರೀ ಕೃಷ್ಣ ಧರ್ಮ ರಕ್ಷಣೆಗೆ ಹಿಂಸೆ ಮಾಡಬಹುದು ಎಂದು ಬೋಧಿಸಿದ್ದಾನೆ. ಅಹಿಂಸೆಯ ಪ್ರಸ್ತಾವ ಮಾಡಿದ್ದು ಅರ್ಜುನ ಎಂದು ಹಿರಿಯ ಕಾದಂಬರಿಕಾರ ಡಾ| ಎಸ್. ಎಲ್. ಭೈರಪ್ಪ ಹೇಳಿದರು.
ಕೃಷ್ಣಮಠ, ಪರ್ಯಾಯ ಪುತ್ತಿಗೆ ಮಠದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಮಾಸೋತ್ಸವದಲ್ಲಿ ಜರಗಿದ ಸಪ್ತೋತ್ಸವದ ಸಮಾರೋಪದಲ್ಲಿ ಮಠದಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ನಾವು ಶ್ರೀ ಕೃಷ್ಣನನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದೇವೆ. ಆತನನ್ನು ನಾವು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಳ್ಳಬೇಕು ಎಂದರು. ಜೀವನದ ಮೌಲ್ಯಗಳು ಸಾಹಿತ್ಯದಲ್ಲಿ ಕಾಣಬೇಕು. ನಾನು ಚಿಕ್ಕವನಿದ್ದಾಗಿನಿಂದ ಕಥೆ ಹೇಳುವ ಪ್ರವೃತ್ತಿ ಹೊಂದಿದ್ದು, ಆದ್ದರಿಂದಲೇ ಕಥೆ ಬರೆಯಲು ಸಾಧ್ಯವಾಗಿದೆ ಎಂದರು.