ಒಬ್ಬ ಮುಖ್ಯಮಂತ್ರಿಯಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು : ಸುನಿಲ್ ಕುಮಾರ್

ಉಡುಪಿ : ಕಾರ್ಕಳದ ಪರಶುರಾಮ ಥೀಂಪಾರ್ಕ್‌ನಲ್ಲಿ ಹನ್ನೊಂದು ಕೋಟಿ ರೂ. ಹಗರಣವಾಗಿದೆ ಎಂದು ವಿಧಾನಸಭೆ ಕಲಾಪದಲ್ಲಿ ನೀವು ನನ್ನ ವಿರುದ್ಧ ಆರೋಪಿಸಿದ್ದೀರಿ. ಆದರೆ ಈ ಯೋಜನೆಗೆ ಇದುವರೆಗೆ ಬಿಡುಗಡೆಯಾಗಿದ್ದೇ 6 ಕೋಟಿ ರೂ!
ಒಬ್ಬ ಮುಖ್ಯಮಂತ್ರಿಯಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಶುರಾಮ ಥೀಂ ಪಾರ್ಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರು ಸುಳ್ಳು ನರೇಟಿವ್ ಕಟ್ಟುತ್ತಲೇ ಇದ್ದಾರೆ. ಇವರಿಗೆ ಸತ್ಯ ಬಹಿರಂಗವಾಗುವುದು ಬೇಕಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯಾಗುವುದು ಬೇಕಿಲ್ಲ. ನಿರಂತರ ಆರೋಪ ನಡೆಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಮಾತ್ರ‌ ಉದ್ದೇಶ. ಪ್ರತಿ ಬಾರಿಯೂ ಅಧಿವೇಶನ ಸಂದರ್ಭದಲ್ಲಿ ಥೀಂ ಪಾರ್ಕ್ ಬಗ್ಗೆ ಅಪಪ್ರಚಾರ ನಡೆಸುವುದು ಈ ಸರ್ಕಾರಕ್ಕೆ ಹಾಗೂ ಕಾರ್ಕಳ ಕಾಂಗ್ರೆಸ್ ಮುಖಂಡರಿಗೆ ಚಟವಾಗಿಬಿಟ್ಟಿದೆ.
ಕಳೆದ ಅಧೀವೇಶನದ ಸಮಯದಲ್ಲಿ ತನಿಖೆ ನಡೆಸುತ್ತೇವೆ ಎಂದರು. ಸಿಐಡಿ ತನಿಖೆಗೂ ಸೂಚಿಸಿದರು. ಆದರೆ ಇದುವರೆಗೆ ತನಿಖೆ ಪ್ರಗತಿಯಾಗಿಲ್ಲ. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಚುನಾವಣೆ ನೀತಿ ಸಂಹಿತೆಯ ನೆಪ ಹೇಳಿ ತಪ್ಪಿಸಿಕೊಂಡರು. ಈಗ ಮುಡಾದಲ್ಲಿ ಭೂಮಿ ನುಂಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಹೈಕಮಾಂಡ್ ಭಂಡಾರ ತುಂಬಿ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಮತ್ತೆ ಪರಶುರಾಮ ಥೀಮ್ ಪಾರ್ಕ್ ನೆನಪಾಗಿದೆ. ನಿಮ್ಮನ್ನೆಲ್ಲ ಬಲಿ ಹಾಕುತ್ತೇನೆ ಎಂದು ಸದನದಲ್ಲಿ ತೊಡೆ ತಟ್ಟಿದಷ್ಟೇ ದಮ್ಮು- ತಾಕತ್ತು ನಿಜಕ್ಕೂ ಇದ್ದರೆ ಮೊದಲು ನ್ಯಾಯಸಮ್ಮತ ತನಿಖೆ ನಡೆಸಿ, ಬೇಕಾದರೆ ಸಿಬಿಐ ತನಿಖೆಗೂ ಆದೇಶಿಸಿ. ಎಸ್ಎಸ್ಎಸ್ಐಟಿ ರಚನೆ ಮಾಡಿದರೂ ನೋ ಪ್ರಾಬ್ಲೆಮ್‌! ಅದನ್ನು ಬಿಟ್ಟು ಅಪಪ್ರಚಾರದ ತುತ್ತೂರಿ ಊದುತ್ತಾ ಹೋದರೆ ನಮ್ಮ ತಿರುಗೇಟು ತಾಳುವುದಕ್ಕೂ ಸಿದ್ದರಾಗಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ