ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಉಡುಪಿ : ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯ ಪೊಲೀಸರು ಆರೋಪಿ ಭಟ್ಕಳದ ನಿವಾಸಿ ಮೊಹಮ್ಮದ್‌ ಶುರೈಮ್‌(22)ನನ್ನು ಬಂಧಿಸಿದ್ದಾರೆ.

ಉಡುಪಿಯ ಗುಡ್ಡೆಯಂಗಡಿಯ ನಿವಾಸಿ ಬೆಂಗಳೂರಿನಲ್ಲಿ ಐಟಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ಯುವತಿ ಆ. 24ಕ್ಕೆ ರಾತ್ರಿ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುವ ರೈಲು ಹತ್ತಿದ್ದರು. ಆ. 25ರಂದು ಬೆಳಗ್ಗೆ 11ಕ್ಕೆ ರೈಲು ಮೂಲ್ಕಿ ದಾಟಿದ ಬಳಿಕ ಆಕೆಗೆ ಆರೋಪಿ ಪದೇಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬಳಿಕ ಗಲಾಟೆ ನಡೆದು ಕ್ಷಮೆ ಯಾಚಿಸಿದ್ದ. ಕೂಡಲೇ ಯುವತಿ ಆತನ ಚಿತ್ರ ತೆಗೆದು ರೈಲ್ವೇಗೆ ಆ್ಯಪ್‌ ಮೂಲಕ ದೂರು ನೀಡಿದ್ದರು. ಅನಂತರ ಉಡುಪಿ ರೈಲು ನಿಲ್ದಾಣಕ್ಕೆ ಬಂದ ಬಳಿಕ ರೈಲ್ವೇ ಪೊಲೀಸರಿಗೂ ದೂರು ನೀಡಿದ್ದರು.

ರೈಲ್ವೇ ಪೊಲೀಸರು ಇದನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಿದರು. ಈ ನಡುವೆ ರೈಲ್ವೇ ಆ್ಯಪ್‌ ಮೂಲಕ ದೂರು ದಾಖಲಾಗುತ್ತಿದ್ದಂತೆ ಮೇಲಾಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಕಾರ್ಯಾಚರಣೆಗೆ ಇಳಿದರು.

ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಅವರ ನಿರ್ದೇಶನದಂತೆ ಮಣಿಪಾಲ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ದೇವರಾಜ್‌ ಟಿ.ವಿ., ಪಿಎಸ್‌ಐ ರಾಘವೇಂದ್ರ, ಎಎಸ್‌ಐ ವಿವೇಕ್‌, ಸಿಬಂದಿ ಇಮ್ರಾನ್‌, ರಘು, ವಿದ್ಯಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಯುವತಿಯ ಈ ನಡೆಯಿಂದ ಆರೋಪಿಯನ್ನು ಪೊಲೀಸರು ಶೀಘ್ರದಲ್ಲಿ ಬಂಧಿಸಲು ಸಾಧ್ಯವಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ