4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ 3 ವರ್ಷಗಳ ಕಾಲ ಶಿಕ್ಷೆ ಮತ್ತು 10 ಸಾವಿರ ರೂ ದಂಡ

ಮಂಗಳೂರು : 4 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 3 ವರ್ಷಗಳ ಕಾಲ ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸಂಜೀವ ನಾಯ್ಕ (57) ಶಿಕ್ಷೆಗೊಳಗಾದ ಅಪರಾಧಿ.

ಆರೋಪಿ ಸಂಜೀವ ನಾಯ್ಕ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದಲ್ಲಿ 4 ವರ್ಷ 5 ತಿಂಗಳ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. 2024 ಜನವರಿ 23ರಂದು 4-30ರಿಂದ 5-00 ಗಂಟೆ ಮಧ್ಯೆ ಆರೋಪಿಯ ಮನೆಯಲ್ಲಿ ಯಾರು ಇಲ್ಲದ ಸಮಯ ಈತನು ಲೈಂಗಿಕ ಕಿರುಕುಳ ನೀಡಿದ್ದನು. ಆರೋಪಿಯ ವಿರುದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಬಾಲಕಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಠಾಣಾ ಮೊ.ನಂ 14/2024ರಲ್ಲಿ ಪ್ರಕರಣವು ದಾಖಲಾಗಿದ್ದು, ಆಗಿನ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ. ಎಸ್‌ರವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 9 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು ಮತ್ತು 21 ದಾಖಲೆಗಳನ್ನು ಗುರುತಿಸಲಾಗಿತ್ತು. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಲಾಗಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮಾನು ಕೆ. ಎಸ್. ರವರು ಆರೋಪಿ ಸಂಜೀವ ನಾಯ್ಕ‌ನಿಗೆ ಭಾರತೀಯ ದಂಡ ಸಂಹಿತೆಯ ಕಲಂ: 354(A) ಮತ್ತು ಕಲಂ: 8 ಪೊಕ್ಸೋ ಕಾಯ್ದೆಯಂತೆ 3 ವರ್ಷಗಳ ಕಾಲ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿರುತ್ತದೆ. ದಂಡದ ಹಣವಾದ 10 ಸಾವಿರ ರೂಪಾಯಿ ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿರುತ್ತದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ ರೂಪಾಯಿ 25,000/- ನ್ನು ಪರಿಹಾರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ ಬದರಿನಾಥ ನಾಯರಿ‌ರವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.

Related posts

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ