ಸೆಪ್ಟೆಂಬರ್ 15 – ಜಿಲ್ಲೆಯ ಮಾನವ ಸರಪಳಿಯಲ್ಲಿ ಒಂದು ಲಕ್ಷ ಜನ ಭಾಗಿ : ಜಿಲ್ಲಾಧಿಕಾರಿ ವಿದ್ಯಾಕುಮಾರಿ

ಉಡುಪಿ : ರಾಜ್ಯ ಸರಕಾರ ಸೆಪ್ಟೆಂಬರ್‌ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ರಾಜ್ಯಾದ್ಯಂತ ನಡೆಸಲುದ್ದೇಶಿಸಿರುವ ಮಾನವ ಸರಪಳಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರದ ಶಿರೂರು ಟೋಲ್‌ಗೇಟ್‌ನಿಂದ ದಕ್ಷಿಣದ ಹೆಜಮಾಡಿ ಟೋಲ್‌ಗೇಟ್‌ವರೆಗೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸುಮಾರು 107ಕಿ.ಮೀ ಉದ್ದದ ಮಾನವ ಸರಪಳಿಯನ್ನು ರಚಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನತೆಗೆ ತಲುಪಿಸುವ ಉದ್ದೇಶವಿದೆ ಎಂದು ಅವರು ವಿವರಿಸಿದರು.

ಮಾನವ ಸರಪಳಿಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕು ಮಟ್ಟದ, ಗ್ರಾಪಂ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು, ಸದಸ್ಯರು, ಜಿಲ್ಲೆಯ ಶಾಲಾ-ಕಾಲೇಜುಗಳ ಬೋಧಕ, ಬೋಧ‌ಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಹಕಾರಿ, ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು, ರೋಟರಿ, ಲಯನ್ಸ್ ರೆಡ್‌ಕ್ರಾಸ್‌ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಹಾಗೂ ಆಸಕ್ತ ಗಣ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಯವರ ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದ್ದು, ಮೇಲುಸ್ತುವಾರಿಗಾಗಿ ಸಮಿತಿಗಳನ್ನು ರಚಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಇದರಲ್ಲಿ ಜಿಲ್ಲೆಯ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ