ಹಿರಿಯ ಸಾಧಕ ಪ್ರೊ.ಹೆರಂಜೆ ಕೃಷ್ಣ ಭಟ್ ವಿಧಿವಶ

ಉಡುಪಿ : ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಇಂದ್ರಾಳಿ ಯಕ್ಷಗಾನ ಕೇಂದ್ರ, ಪ್ರಾದೇಶಿಕ ಸಂಶೋಧನ ಕೇಂದ್ರಗಳ (ಆರ್‌ಆರ್‌ಸಿ) ನಿರ್ದೇಶಕರಾಗಿದ್ದ ಪ್ರೊ.ಹೆರಂಜೆ ಕೃಷ್ಣ ಭಟ್ (84) ಅಸೌಖ್ಯದಿಂದ ಮೇ 8ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಮೂಲತಃ ಬ್ರಹ್ಮಾವರ ಸಮೀಪದ ಹೆರಂಜೆಯವರಾದ ಭಟ್ಟರು ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಸುದೀರ್ಘ ಕಾಲ ಎಂಜಿಎಂ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಉಪನ್ಯಾಸಕರು, ವಿಭಾಗ ಮುಖ್ಯಸ್ಥರು, ಎನ್‌ಸಿಸಿ ಮುಖ್ಯಸ್ಥರಾಗಿ, ಎಸ್ಟೇಟ್ ಮೆನೇಜರ್ ಆಗಿ ಸೇವೆ ಸಲ್ಲಿಸಿದ್ದರು.

ಪ್ರೊ.ಕು.ಶಿ.ಹರಿದಾಸ ಭಟ್ಟರ ಬಳಿಕ, ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ, ಆರ್‌ಆರ್‌ಸಿ ನಿರ್ದೇಶಕರಾಗಿದ್ದರು. ಇವರ ಸಂಪಾದಕತ್ವದಲ್ಲಿ ಗೋವಿಂದ ಪೈ ಸಂಶೋಧನ ಸಂಪುಟದಂತಹ (ಮೊದಲ ಸಂಪುಟ) ಹತ್ತಾರು ಗ್ರಂಥಗಳು ಕೇಂದ್ರದಿಂದ ಹೊರಬಂದಿದ್ದವು. ಇವರ ನೇತೃತ್ವದಲ್ಲಿ ವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆದಿದ್ದವು.

ಎಂಜಿಎಂ ಕಾಲೇಜಿನ ಆವರಣದಲ್ಲಿ ವಾದಿರಾಜ ಕನಕದಾಸ ಸಂಗೀತೋತ್ಸವ, ಸಾಂಸ್ಕೃತಿಕ ಹಬ್ಬಗಳು, ತುಳು ಸಮ್ಮೇಳನ, ಹಲವು ಜನಪದ ಪ್ರದರ್ಶನ ಕಲೆಗಳ ಕಾರ್ಯಕ್ರಮಗಳ ದಾಖಲಾತಿಗಳು ನಡೆದವು. ಉತ್ತಮ ಸಂಘಟಕರಾಗಿದ್ದ ಕೃಷ್ಣ ಭಟ್ಟರು ಸುದೀರ್ಘ ಕಾಲ ಉಡುಪಿ ಪರ್ಯಾಯೋತ್ಸವದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.

ವೇದಾಧ್ಯಯವನ್ನೂ ನಡೆಸಿದ್ದ ಭಟ್ಟರು ಡಾ.ಶಿವರಾಮ ಕಾರಂತ, ಕೆ.ಕೆ.ಹೆಬ್ಬಾರರಂತಹ ಹಿರಿಯರ ಒಡನಾಟವನ್ನು ಹೊಂದಿದ್ದರು.

ಸುಮಾರು ಐದು ದಶಕಗಳ ಕಾಲ ಉಡುಪಿಯಲ್ಲಿ ನಡೆದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರೊ.ಭಟ್ಟರು ಹಳೆಯ ಮತ್ತು ಹೊಸ ತಲೆಮಾರಿನ ನಡುವಿನ ಕೊಂಡಿಯಾಗಿದ್ದರು. ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದರೂ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ತೆರೆಮರೆಯಲ್ಲಿಯೇ ನಿಂತು ಕಾರ್ಯ ನಿರ್ವಹಿಸುವ ಅವರ ಕಾರ್ಯಶೈಲಿ ಅನುಕರಣೀಯವಾಗಿತ್ತು. ಇವರ ಅಮೂಲ್ಯ ಬಹುಮುಖ ಸೇವೆಯನ್ನು ಪರಿಗಣಿಸಿ ಶ್ರೀಕೃಷ್ಣಮಠದಲ್ಲಿ ವಿವಿಧ ಮಠಾಧೀಶರಿಂದ, 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ತಿಂಗಳೆ ಗರೋಡಿ ಉತ್ಸವ ಸಹಿತ ಹಲವು ಗೌರವ ಪುರಸ್ಕಾರಗಳು ಸಂದಿವೆ.

ಸಂತಾಪ ಪ್ರೊ. ಭಟ್ಟರ ನಿಧನಕ್ಕೆ ಪರ್ಯಾಯ ಪುತ್ತಿಗೆ, ಪೇಜಾವರ, ಅದಮಾರು, ಪಲಿಮಾರು, ಭಂಡಾರಕೇರಿ, ಕಾಣಿಯೂರು, ಸೋದೆ, ಶೀರೂರು ಮಠಾಧೀಶರು, ಧರ್ಮಸ್ಥಳದ ಧರ್ಮಾಧಿಕಾರಿ ಡಾವೀರೇಂದ್ರ ಹೆಗ್ಗಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಮೂಡಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ ಸಂತಾಪ ಸೂಚಿಸಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ