ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ನಿಧನ

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂ|ಡಾ| ಲೊರೇನ್ಸ್ ಸಿ ಡಿಸೋಜಾ ಅವರು ದೀರ್ಘಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.


1948 ನವೆಂಬರ್ 28ರಂದು ಶಿರ್ವ ಸಮೀಪದ ಪೆರ್ನಾಲ್‌ನಲ್ಲಿ ಜನಿಸಿದ ಅವರು 1977‌ರಲ್ಲಿ ಧರ್ಮಗುರುವಾಗಿ ಯಾಜಕ ದೀಕ್ಷೆಯನ್ನು ಪಡೆದರು.

ಗುರುದೀಕ್ಷೇ ಪಡೆದ ಬಳಿಕ ಹಲವಾರು ಹುದ್ದೆಗಳನ್ನು ಅಲಂಕರಿಸಿರುವ ವಂ| ಲೋರೆನ್ಸ್ ಡಿಸೋಜಾ ಅವರ ಸೇವೆಯ ವಿವರ :
1977-79‌ರ ವರೆಗೆ ಕುಲಶೇಖರ ಚರ್ಚಿನ ಸಹಾಯಕ ಧರ್ಮಗುರುಗಳಾಗಿ, 1979-84‌ರ ತನಕ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿ ಸಹಾಯಕ ನಿರ್ದೇಶಕರಾಗಿ, 1984-92‌ರ ವರೆಗೆ ಮಂಗಳೂರು ಧರ್ಮಪ್ರಾಂತ್ಯ ಕಥೊಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ, 1998-2006‌ರ ವರೆಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ, 2006-2008 ರ ವರೆಗೆ ಕುಲಶೇಖರ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ, 2008-2014 ರ ವರೆಗೆ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ನಿರ್ದೇಶಕರಾಗಿ, 2015-18ರ ವರೆಗೆ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿಯಾಗಿ, 2018-2020ರ ವರೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

ನಾಲ್ಕು ದಶಕಗಳ ಸುದೀರ್ಘ ಧಾರ್ಮಿಕ ಸೇವೆಯ ಬಳಿಕ 2020‌ರಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿ ಕಲ್ಯಾಣಪುರದಲ್ಲಿ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್‌ನಲ್ಲಿ ವಾಸ್ತವ್ಯ ಹೊಂದಿದ್ದರು.

ಮೃತರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿಗಳಾದ ವಂ|ಡಾ|ರೋಶನ್ ಡಿಸೋಜಾ, ಧರ್ಮಪ್ರಾಂತ್ಯದ ಧರ್ಮಗುರುಗಳು ಹಾಗೂ ಭಕ್ತವೃಂದ ಕಂಬನಿ ಮಿಡಿದಿದ್ದಾರೆ.

ಮೃತ ವಂ|ಲೋರೆನ್ಸ್ ಸಿ ಡಿಸೋಜಾ ಅವರ ಅಂತ್ಯಕ್ರಿಯೆ ನವೆಂಬರ್ 16 ಶನಿವಾರ ಬೆಳಿಗ್ಗೆ ನಡೆಯಲಿದ್ದು, 8.00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನಲ್ಲಿ ಇರಿಸಿ, ಬೆಳಿಗ್ಗೆ 9.30ಕ್ಕೆ ಬಲಿಪೂಜೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್