ಎಸ್.ಸಿ.ಎಸ್.ಪಿ. – ಟಿ.ಎಸ್.ಪಿ. ಹಣ ದುರ್ಬಳಕೆ ಮಾಡಿದ ದಲಿತ ದ್ರೋಹಿ ರಾಜ್ಯ ಸರಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ

ಉಡುಪಿ : ಅನುಸೂಚಿತ ಜಾತಿ ಮತ್ತು ಗಿರಿಜನ ಉಪಯೋಜನೆಯ (ಎಸ್.ಸಿ.ಎಸ್.ಪಿ. – ಟಿ.ಎಸ್.ಪಿ.) ಸುಮಾರು ರೂ 25,000 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿರುವ ದಲಿತ ದ್ರೋಹಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಫೆಬ್ರವರಿ 28ರಂದು ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಅವರು ಸೋಮವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನಾಂದೋಲನವನ್ನು ರೂಪಿಸಿರುವ ರಾಜ್ಯ ಬಿಜೆಪಿ ಈಗಾಗಲೇ 14 ತಂಡಗಳನ್ನು ರಚಿಸಿದ್ದು, ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಮಣಿಪಾಲದ ರಜತಾದ್ರಿಯ ಬಳಿ ನಡೆಯುವ ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಆಗ್ರಹಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರಾಜ್ಯ ತಂಡದ ಪ್ರಮುಖರಾದ ಸಂಸದ ರಮೇಶ್ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರು ಭಾಗವಹಿಸಲಿದ್ದಾರೆ.

ಫೆಬ್ರವರಿ 25ರಂದು ಉಡುಪಿ ಜಿಲ್ಲಾ ವ್ಯಾಪ್ತಿಯ ಕಾರ್ಕಳ, ಕಾಪು, ಉಡುಪಿ ನಗರ, ಉಡುಪಿ ಗ್ರಾಮಾಂತರ, ಕುಂದಾಪುರ ಮತ್ತು ಬೈಂದೂರು ಮಂಡಲಗಳಲ್ಲಿ ಪೂರ್ವಭಾವಿ ಸಭೆಗಳು ನಡೆಯಲಿದ್ದು, ಫೆ.28ರಂದು ನಡೆಯುವ ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Related posts

30 ಲಕ್ಷ ವೆಚ್ಚದಲ್ಲಿ ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

ದೇವಸ್ಥಾನದ ಡಬ್ಬಿ ಒಡೆಯಲು ಯತ್ನಿಸಿ ಸೈರನ್ ಮೊಳಗಿದಾಗ ಪರಾರಿಯಾದ ಕಳ್ಳ – ಸಿಸಿ ಕ್ಯಾಮೆರಾದಲ್ಲಿ ಸೆರೆ

ಅಪಾರ್ಟ್ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು