ಮಣಿಪಾಲ : ಕಾಸರಗೋಡಿನಲ್ಲಿ ಕನ್ನಡ ಭಾಷಿಕರ ಮತ್ತು ಕನ್ನಡ ಶಾಲೆಗಳ ಮೇಲೆ ಆಗುತ್ತಿರುವ ದಬ್ಟಾಳಿಕೆಯ ಮತ್ತು ಭಾಷಾ ವಿರೋಧಿ ನಿಲುವು ಖಂಡನೀಯ. ಕಾಸರಗೋಡಿನ ಕನ್ನಡಿಗರು ಹಾಗೂ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸರಕಾರ ಕೇರಳದ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇಲಾಖೆಯೊಡನೆ ಸಂಪರ್ಕ ನಡೆಸಿ ಕಾಸರಗೋಡಿನ ಕನ್ನಡ ಶಾಲೆಗಳು ಮತ್ತು ಕನ್ನಡಿಗರ ಮೇಲೆ ಆಗುತ್ತಿರುವ ದಬ್ಟಾಳಿಕೆಯನ್ನು ಸರಿಪಡಿಸಲು ಹಾಗೂ ಕನ್ನಡ ಅಸ್ಮಿತೆಯನ್ನು ಕಾಪಾಡಲು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತಡ ತರಬೇಕೆಂದು ನಿಯೋಗ ಆಗ್ರಹಿಸಿತು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಗೌರವ ಕೋಶಾಧಿಕಾರಿ ಮನೋಹರ ಪಿ., ಕಾಸರಗೋಡು ಕಸಾಪ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಗಮಕಕಲಾ ಪರಿಷತ್ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ಕಸಾಪ ಜಿಲ್ಲಾ ಹಾಗೂ ತಾಲೂಕು ಸಮಿತಿಯ ನರಸಿಂಹ ಮೂರ್ತಿ, ಪುಂಡಲೀಕ ಮರಾಠೆ, ಜಿ.ರಾಮಚಂದ್ರ ಐತಾಳ್, ಪ್ರೇಮಾಶರದಿ ಕಾಸರಗೋಡು ನಿಯೋಗದಲ್ಲಿದ್ದರು.