ಮಾದಕದ್ರವ್ಯ ಎಂಡಿಎಂಎ ಮಾರಾಟ – ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರು ಅರೆಸ್ಟ್

ಮಂಗಳೂರು : ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 200 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಅಂದ್ರಹಳ್ಳಿ ನಿವಾಸಿ ದರ್ಶನ್ ಕೆ.ಜಿ.(25), ನೈಜೀರಿಯಾ ಪ್ರಜೆ, ಹಾಲಿ ಬೆಂಗಳೂರಿನ ಬೆಟ್ಟಹಲ್ಸೂರ್‌ನಲ್ಲಿ ವಾಸ್ತವ್ಯವಿರುವ ಚಿಕ ಜೋಸೇಫ್ ಇಝಿ(26) ಬಂಧಿತ ಆರೋಪಿಗಳು.

ಇತ್ತೀಚೆಗೆ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಕ್ಬಾಲ್ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಎಂಡಿಎಂಎಯನ್ನು ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ಆದ್ದರಿಂದ ಮಂಗಳೂರಿನಿಂದ ಹಾಗೂ ಬೆಂಗಳೂರಿನಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 10,00,000 ರೂ‌. ಮೌಲ್ಯದ 200 ಗ್ರಾಂ ನಿಷೇಧಿತ ಮಾದಕದ್ರವ್ಯ ಎಂಡಿಎಂಎ, ಮಾರುತಿ ಬಲೆನೋ ಕಾರು, 5 ಮೊಬೈಲ್ ಫೋನ್‌ಗಳು, ವಿವಿಧ ಬ್ಯಾಂಕ್‌ಗಳ 5 ಡೆಬಿಟ್ ಕಾರ್ಡ್‌ಗಳು, 7 ಸಿಮ್ ಕಾರ್ಡ್‌ಗಳು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 18,25,500 ರೂ. ಆಗಬಹುದು. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಆರೋಪಿ ಚಿಕ ಜೋಸೆಫ್ ಇಝಿ 2023ರ ಮೇ ತಿಂಗಳಲ್ಲಿ ಭಾರತಕ್ಕೆ ಉದ್ಯೋಗ ವೀಸಾದಲ್ಲಿ ಬಂದಿದ್ದನು. ಇಲ್ಲಿ ಬೆಂಗಳೂರಿನಲ್ಲಿ ಯಲಹಂಕದಲ್ಲಿ ಹೇರ್ ಕಟ್ಟಿಂಗ್ ಉದ್ಯೋಗ ಮಾಡುತ್ತಿದ್ದ.‌ ಈ ಸಂದರ್ಭ ಈತನ ವಿರುದ್ಧ ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 4 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಈ ಮಾದಕದ್ರವ್ಯ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ