ರಿವರ್‌ಫ್ರಂಟ್ ಯೋಜನೆ ತಡೆಗೋಡೆ ಕುಸಿತ – ಸಮಗ್ರ ತನಿಖೆಗೆ ದಿನೇಶ್ ಗುಂಡೂರಾವ್ ಆದೇಶ

ಮಂಗಳೂರು : ಸ್ಮಾರ್ಟ್‌ಸಿಟಿ ರಿವರ್‌ಫ್ರಂಟ್ ಯೋಜನೆಯ ತಡೆಗೋಡೆ ಕುಸಿತದ ಬಗ್ಗೆ ಡಿಸಿ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಿ, ವಾರದೊಳಗೆ ವರದಿ ಸಲ್ಲಿಸಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುಂಡೂರಾವ್ ಸೂಚನೆ ನೀಡಿದರು.

ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಡೆಗೋಡೆ ಕುಸಿತದ ವಿರುದ್ಧ ಎಂಎಲ್‌ಸಿ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಶಾಸಕ ವೇದವ್ಯಾಸ ಕಾಮತ್, ಯೋಜನೆ ಸಾಗುವ ದಾರಿಯಲ್ಲಿ ಬಂದರು ಇಲಾಖೆ ಜಾಗವನ್ನು ಲೀಸ್‌ಗೆ ನೀಡಿದ್ದರು. ಈಗ ಯೋಜನೆಗೆ ನೋಟಿಸ್ ನೀಡಿದರೂ ಅವರು ಜಾಗ ಬಿಟ್ಟುಕೊಡುತ್ತಿಲ್ಲ. ಅವರೇ ಈಗ ಸಿಆರ್‌ಝಡ್ ಹೆಸರಲ್ಲಿ ಕೋರ್ಟ್‌ಗೆ ಹೋಗಿದ್ದಾರೆ ಎಂದರು.

ಈ ವೇಳೆ ಬಂದರು ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಆದಷ್ಟು ಶೀಘ್ರ ಕೋರ್ಟ್ ಕೇಸ್ ತೆರವು ಮಾಡಿಸಬೇಕು ಎಂದು ದಿನೇಶ್ ಗುಂಡೂರಾವ್ ಸೂಚಿಸಿದರು.

ಗ್ರಾಮೀಣ ವಸತಿ ಯೋಜನೆಯಡಿ ಮಂಜೂರಾಗಿರುವ 2,564 ಮನೆಗಳ ಕಾಮಗಾರಿ 4ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಸಭೆಯಲ್ಲಿ ಎಂಎಲ್ಎ ಅಶೋಕ್ ರೈ, ಎಂಎಲ್‌ಸಿ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು. ಆಗ ಪ್ರಾಜೆಕ್ಟ್ ಮ್ಯಾನೇಜರ್ ಅದು ಬ್ಲಾಕ್ ಆಗಿದೆ ಎಂದರು. ಸಮಸ್ಯೆಯಿದೆ ಅಂದರೆ ಅದನ್ನು ಪರಿಹಾರ ಕೊಡಬೇಕಾದ ಜವಾಬ್ದಾರಿ ತಮ್ಮ ಮೇಲಿದೆ. ಆದ್ದರಿಂದ ಪ್ರಾಜೆಕ್ಟ್ ಮ್ಯಾನೇಜರ್ ಮೇಲೆ ಆ್ಯಕ್ಷನ್ ತೆಗೆದುಕೊಳ್ಳಲು ಇಲಾಖೆಯ ಮೇಲಾಧಿಕಾರಿಗೆ ಸೂಚನೆ ನೀಡಿ ಎಂದು ಉಸ್ತುವಾರಿ ಸಚಿವರು ಡಿಸಿಯವರಿಗೆ ಹೇಳಿದರು.

ಪಾವೂರು-ಉಳಿಯ‌ ಮರಳು ದಂಧೆಯಿಂದ ಒಂದು ದ್ವೀಪವೇ ನಾಶವಾಗುತ್ತಿದೆ. ಸುಮಾರು 50ರಷ್ಟು ಕುಟುಂಬಗಳು ಇಲ್ಲಿ ವಾಸಿಸುತ್ತಿದೆ ಎಂದು ಎಂಎಲ್‌ಸಿ ಐವನ್ ಡಿಸೋಜರವರು ಸಚಿವ ದಿನೇಶ್ ಗುಂಡೂರಾವ್ ಅವರ ಗಮನಸೆಳೆದರು. ಈ ವೇಳೆ ಸಚಿವರು ತನಗೂ ದೂರು ಬಂದಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಲ್ಲಿ ಮಾಹಿತಿ ಕೇಳಿದರು‌.

ಈ ವೇಳೆ ಕಮಿಷನರ್ ಅಂಥದ್ದೇನೂ ಇಲ್ಲ. ನಮ್ಮ ಗಮನಕ್ಕೆ ಬಂದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂಬ ಹಾರಿಕೆ ಉತ್ತರ ನೀಡಿದರು. ಇಡೀ ಊರಿಗೆ ಗೊತ್ತಿದ್ದರೂ ನಿಮಗೆ ಗೊತ್ತಿಲ್ಲವೇ?, ಅವ್ಯಾಹತವಾಗಿ ನಡೆಯುವ ಈ ಮರಳು ದಂಧೆಯಲ್ಲಿ ಎಲ್ಲರೂ ಶಾಮೀಲಾಗಿದ್ದಾರೆ ಎಂದು ಹೇಳಿದ ಉಸ್ತುವಾರಿ ಸಚಿವರು, ದ್ವೀಪದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ದಂಧೆ ತಕ್ಷಣ ನಿಲ್ಲಬೇಕು. ನೀವು ಎಸ್ ಅಂದರೆ ಸಾಲದು ಇಂಥದ್ದನ್ನು ತಕ್ಷಣ ನಿಲ್ಲಿಸಿ, ನಮಗೆ ಆಕ್ಷನ್ ಬೇಕು ಎಂದು ಪೊಲೀಸ್ ಕಮಿಷನರ್‌ಗೆ ತಾಕೀತು ಮಾಡಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ