ವಿದ್ವಾಂಸ ಗುರುರಾಜ ಮಾರ್ಪಳ್ಳಿ ನಿರ್ದೇಶನದಲ್ಲಿ ಋತುಪರ್ಣ ಶಾಸ್ತ್ರೀಯ ಯಕ್ಷಗಾನ ಪ್ರದರ್ಶನ

ಉಡುಪಿ : ಇಂದು ಆಧುನಿಕತೆಯನ್ನು ಮೇಳೈಸಿಕೊಂಡು ವಿಜೃಂಭಿಸುತ್ತಿರುವ ಯಕ್ಷಗಾನ ಪ್ರದರ್ಶನದ ಅಬ್ಬರದ ನಡುವೆ ಶಾಸ್ತ್ರೀಯ ರೀತಿಯಲ್ಲಿ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವ ವಿದ್ವಾಂಸ ಡಾ.ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅನುಕರಣೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ವನಸುಮ ಟ್ರಸ್ಟ್ ಕಟಪಾಡಿ ಸಹಭಾಗಿತ್ವದಲ್ಲಿ ಖ್ಯಾತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಹುಟ್ಟುಹಾಕಿರುವ ಶಾಸ್ತ್ರೀಯ ಯಕ್ಷ ಮೇಳ ಉಡುಪಿ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾ ಭವನದಲ್ಲಿ ಭಾನುವಾರ ನಡೆದ ಋತುಪರ್ಣ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನದ ಹಿಂದೆ ಹೇಗಿತ್ತು ಎಂಬುದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವಿಲ್ಲ. ಇಂದು ಆಧುನಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಕಲಾವಿದರಿಗೆ ಉತ್ತಮ ಸಂಪಾದನೆಯ ದಾರಿ ನೀಡಿದೆ. ಹಿಂದಿನ ಯಕ್ಷಗಾನವನ್ನು ಕಂಡವರು, ಇಂದಿನ ಬದಲಾವಣೆಗಳನ್ನು ಕಂಡು ವ್ಯಥೆ ಪಟ್ಟಿರುವುದನ್ನು ಕಂಡಿದ್ದೇನೆ. ಈ ಸಂದರ್ಭದಲ್ಲಿ ಯಕ್ಷಗಾನದ ಶಾಸ್ತ್ರೀಯ ಮುಖ ಅಳಿದು ಹೋಗಬಾರದು ಎನ್ನುವ ತುಡಿತದೊಂದಿಗೆ ಎಲ್ಲಾ ವಿಭಾಗಗಳಲ್ಲಿ ವೃತ್ತಿಪರ ಪರಿಣತಿಯನ್ನು ಪಡೆದಿರುವ, ಪೂರ್ವ ತಯಾರಿಯಿಲ್ಲದ ಯಕ್ಷಗಾನಕ್ಕೆ ಸಮಯಾಧಾರಿತ ತಾಲೀಮು ಇದು ಶಾಸ್ತ್ರೀಯ ಯಕ್ಷಗಾನ ಮೇಳದ ವೈಶಿಷ್ಟö್ಯವಾಗಿರಬೇಕು ಎನ್ನುವ ತುಡಿತದೊಂದಿಗೆ ಅದನ್ನು ಕಾರ್ಯರೂಪಕ್ಕೆ ತಂದಿರುವ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅಭಿನಂದನೀಯ. ಅವರೊಂದಿಗೆ ಪ್ರಸಿದ್ಧ ರಂಗನಿರ್ದೇಶಕ ಬಾಸುಮ ಕೊಡಗು ಅವರ ಚಿಂತನೆಗಳು ಮೇಳೈಸಿರುವುದು, ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರ ಕಲಾ ಪ್ರೋತ್ಸಾಹ ಇದೆಲ್ಲಾವನ್ನು ಕಂಡಾಗ ಕರಾವಳಿಯಲ್ಲಿ ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎಂಬುದು ವೇದ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ರಂಗ ಪ್ರಯೋಗಗಳು ವಿಶಿಷ್ಟವಾಗಿರುವುದನ್ನು ಕಂಡಿದ್ದೇನೆ. ಶಾಸ್ತ್ರೀಯ ಯಕ್ಷಮೇಳವನ್ನು ಹುಟ್ಟುಹಾಕಿ ಆ ಮೂಲಕ ಯುವ ಪೀಳಿಗೆಗೆ ಶಾಸ್ತೀಯ ಯಕ್ಷಗಾನವನ್ನು ಪರಿಚಯ ಮಾಡಲು ಹೊರಟ ಅವರ ಪ್ರಯತ್ನ ಶ್ಲಾಘನೀಯ ಎಂದರು.

ವನಸುಮ ಟ್ರಸ್ಟ್ನ ಮುಖ್ಯಸ್ಥ, ರಂಗ ನಿರ್ದೇಶಕ ಬಾಸುಮ ಕೊಡಗು ಅವರು ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ರೂವಾರಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ, ಕಾರ್ಯದರ್ಶಿ ವಿನಯ ಆಚಾರ್ಯ ಮುಂಡ್ಕೂರು, ಗಣೇಶ್ ರಾವ್ ಎಲ್ಲೂರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಪ್ರದರ್ಶನಗೊಂಡ ಋತುಪರ್ಣ ಯಕ್ಷಗಾನ ಪ್ರದರ್ಶನದಲ್ಲಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಋತುಪರ್ಣನಾಗಿ ಪಾತ್ರ ವಹಿಸಿದರು. ಬಾಹುಕನಾಗಿ ಪ್ರತೀಶ್ ಕುಮಾರ್ ಬ್ರಹ್ಮಾವರ, ಶನಿ ಪಾತ್ರದಲ್ಲಿ ಶ್ರೀನಿವಾಸ ತಂತ್ರಿ ಪಾದೂರು ಮಿಂಚಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶಶಿಕಿರಣ ಮಣಿಪಾಲ, ಮದ್ದಳೆ ಕೆ.ಜೆ.ಸುಧೀಂದ್ರ ಹಾಗೂ ಚೆಂಡೆಯಲ್ಲಿ ಕೆ.ಜೆ.ಕೃಷ್ಣ ಸಹಕರಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು