ಬಸ್ಸು ನಿಲ್ದಾಣದಲ್ಲಿ ಹಣ ಯಾಚಿಸುತ್ತಿದ್ದ ‘ನಾಪತ್ತೆಯಾಗಿದ್ದ’ ಬಾಲಕನ ರಕ್ಷಣೆ

ಉಡುಪಿ : ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನ ಅನುಮಾನಸ್ಪದ ಚಲನವಲನ ಗಮನಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು, ಬಾಲಕನನ್ನು ವಶಕ್ಕೆ ಪಡೆದು, ಬಳಿಕ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿರುವ ಘಟನೆ ಇಂದು ಸಂಭವಿಸಿದೆ.

ರಕ್ಷಿಸಲ್ಪಟ್ಟ ಬಾಲಕ ದೊಡ್ಡಣಗುಡ್ಡೆಯ ಬಾಲಕರ ಬಾಲ ಭವನದಲ್ಲಿ ಆಶ್ರಯದಲ್ಲಿದ್ದವನು, ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಬಾಲಕರ ಭವನದಿಂದ ಶಾಲೆಗೆಂದು ತೆರಳಿದ ಬಾಲಕ ಶಾಲೆಗೆ ಹೋಗದೆ, ಮರಳಿ ಬಾಲಕರ ಭವನಕ್ಕೂ ಬಾರದೆ ನಾಪತ್ತೆಯಾಗಿದ್ದ. ಬಾಲಕ ಕಾಣೆಯಾಗಿರುವ ಬಗ್ಗೆ ಬಾಲಕರ ಭವನದವರು ಪೋಲಿಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಬಾಲಕ ಬಸ್ಸು ನಿಲ್ದಾಣದಲ್ಲಿರುವ ಪ್ರಯಾಣಿಕರಲ್ಲಿ ಹಣ ಯಾಚಿಸುತ್ತಿದ್ದ ಸಂದರ್ಭ ಅನುಮಾನ ವ್ಯಕ್ತವಾಗಿತ್ತು. ಹಣ ಸಂಗ್ರಹಗೊಂಡ ಬಳಿಕ ಬಾಲಕ ಬಸ್ಸಿನಲ್ಲಿ ಬೇರೆ ಊರಿಗೆ ಪಲಾಯನಗೈಯುವ ಉದ್ಧೇಶ ಹೊಂದಿದ್ದ ಎಂದು ತಿಳಿದುಬಂದಿದೆ. ಒಳಕಾಡು ಅವರ ಸಮಯ ಪ್ರಜ್ಞೆಯಿಂದ ಬಾಲಕ ರಕ್ಷಿಸಲ್ಪಟ್ಟಿದ್ದಾನೆ. ಶಿಕ್ಷಣ ಇಲಾಖೆಯವರು ತಕ್ಷಣ ಮಕ್ಕಳ ರಕ್ಷಣೆಗೆ ನಿಟ್ಟೂರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಸಿ. ಸಿ. ಕ್ಯಾಮೆರಾ ಅಳವಡಿಸಬೇಕೆಂದು ಒಳಕಾಡು ಅವರು ಆಗ್ರಹಿಸಿದ್ದಾರೆ.

Related posts

ಕೋಟತಟ್ಟುವಿನಲ್ಲಿ ಹೆಜ್ಜೇನು ದಾಳಿ : ಇಬ್ಬರ ಸ್ಥಿತಿ ಗಂಭೀರ

ಬಾಕಿ ಇರುವ ಮನೆಹಾನಿ, ಬೆಳೆಹಾನಿ ಪರಿಹಾರ ತಕ್ಷಣ ವಿತರಿಸಿ – ಅಧಿಕಾರಿಗಳಿಗೆ ಎಡಿಸಿ ಸೂಚನೆ

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್