ನದಿಯಲ್ಲಿ ತೇಲಿ ಬರುತ್ತಿದ್ದ ದನದ ರಕ್ಷಣೆ; ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ಪ್ರವಾಹ ರಕ್ಷಣಾ ತಂಡ

ಉಪ್ಪಿನಂಗಡಿ : ತುಂಬಿದ ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ನಡೆದಿದೆ.

ನೇತ್ರಾವತಿ ನದಿಯ ನೀರಿನ ಮಟ್ಟ ಇಂದು ನಿನ್ನೆಗಿಂತಲೂ ಏರಿಕೆಯಾಗಿದ್ದು, 28.05 ಮೀ. ಎತ್ತರದಲ್ಲಿ ಹರಿಯುತ್ತಿತ್ತು. ನದಿಯು ರಭಸದಿಂದ ಹರಿಯುತ್ತಿದ್ದು, ಈ ನದಿಯ ಮಧ್ಯದಲ್ಲಿ ದನವೊಂದು ತೇಲಿಕೊಂಡು ಹೋಗುತ್ತಿರುವುದನ್ನು ನೋಡಿದ ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ಕೂಡಲೇ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದರು.

ತಕ್ಷಣವೇ ಕಾರ್ಯಪ್ರವೃತವಾದ ಈ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ ಮೂಲಕ ತೆರಳಿ ದನದ ಮೂಗುದಾರಕ್ಕೆ ಹಗ್ಗವನ್ನು ಕಟ್ಟಿ ದಡಕ್ಕೆ ತಂದು ಕಟ್ಟಿ ಹಾಕಿದರು.

ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ಈ ರಕ್ಷಣಾ ಕಾರ್ಯಾಚರಣ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಇದ್ದರು.

ಮಹಾನೆರೆ ಬಂದು ಈ ಬಾರಿಯ ಜುಲೈ 26ಕ್ಕೆ 50 ವರ್ಷವಾಗಿದೆ. ಆ ದಿನ ಕೂಡ ಶುಕ್ರವಾರವಾಗಿದ್ದು, ಆ ಸಂದರ್ಭ ಹಲವು ಕಷ್ಟ ನಷ್ಟಗಳು ಸಂಭವಿಸಿತ್ತಲ್ಲದೇ, ಹಲವು ಜಾನುವಾರುಗಳು ಕೊಚ್ಚಿ ಹೋಗಿದ್ದವು.

ಸಾರ್ವಜನಿಕರಿಂದ ಪ್ರಶಂಸೆ : ರಭಸದಿಂದ ಹರಿಯುವ ನದಿ ನೀರಿನಲ್ಲಿ ಜಾನುವಾರುಗಳ ರಕ್ಷಣೆ ಸುಲಭದ ಮಾತಲ್ಲ. ಅದನ್ನು ಹಿಡಿದುಕೊಳ್ಳಲು ಹೋದಾಗ ಅವುಗಳು ಬೆದರಿ ಆ ಕಡೆ, ಈಕಡೆ ಹಾರಲು, ಹೊರಳಾಡಲು ನೋಡುತ್ತವೆ. ಇದರಿಂದ ದೋಣಿಯೇ ಮಗುಚುವ ಸಂಭವವಿದೆ. ಆದರೂ ಇಂತಹ ಅಪಾಯದ ಪರಿಸ್ಥಿತಿಯಲ್ಲಿ ನದಿ ಮಧ್ಯದಿಂದ ದನವನ್ನು ರಕ್ಷಿಸಿ ತಂದ ಪ್ರವಾಹ ರಕ್ಷಣಾ ತಂಡವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ