ಉಡುಪಿ ನಗರದ ರಸ್ತೆಗೆ ಹಾಜಿ ಅಬ್ದುಲ್ಲರ ಹೆಸರಿಡುವಂತೆ ನಗರಸಭೆಗೆ ಮನವಿ : ಪ್ರೊ.ಟಿ. ಮುರುಗೇಶ್

ಉಡುಪಿ : ಜಿಲ್ಲೆಗೆ ಸೇವೆ ಸಲ್ಲಿಸಿರುವ ಮಹಾದಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಹಾಜಿ ಅಬ್ದುಲ್ಲ ಸಾಹೇಬರ ಹೆಸರನ್ನು ನಗರದ ರಸ್ತೆಗೆ ನಾಮಕರಣ ಮಾಡುವಂತೆ ಉಡುಪಿ ನಗರಸಭೆಗೆ ಮನವಿ ಸಲ್ಲಿಸಲಾಗುವುದು ಎಂದು ಇತಿಹಾಸ ತಜ್ಞ ಪ್ರೊ.ಟಿ. ಮುರುಗೇಶ್ ಹೇಳಿದ್ದಾರೆ.

ಜನಸೇವಾ ಟ್ರಸ್ಟ್ ಮೂಡುಗಿಳಿಯೂರು, ಹಸ್ತಚಿತ್ತ ಫೌಂಡೇಶನ್ ವಕ್ವಾಡಿ, ಉಸಿರು ಕೋಟ ಹಾಗೂ ಇತರ ಸಂಘಟನೆಗಳ ಸಹಯೋಗದೊಂದಿಗೆ ಸ್ವರಾಜ್ಯ 75 ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಉಡುಪಿ ಹಾಜಿ ಅಬ್ದುಲ್ಲಾ ಸಾಹೇಬರ ಮನೆಯಲ್ಲಿ ರವಿವಾರ ಜರಗಿದ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ‘ಹೊಂಬೆಳಕು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಹಾಜಿ ಅಬ್ದುಲ್ಲಾ ಸಾಹೇಬರ ನಾಮಫಲಕ ಅನಾವರಣಗೊಳಿಸಿದ ಹಾಜಿ ಅಬ್ದುಲ್ಲಾ ಸಾಹೇಬರ ನಿಕಟ ಸಂಬಂಧಿ ಸೈಯದ್ ಸಿರಾಜ್ ಅಹಮದ್ ಮಾತನಾಡಿ, ಹಾಜಿ ಅಬ್ದುಲ್ಲಾರ ವ್ಯಕ್ತಿತ್ವಕ್ಕೆ ಹಲವು ಆಯಾಮಗಳಿವೆ. ಅದರಲ್ಲಿ ಸ್ವಾತಂತ್ರ್ಯ ಹೋರಾಟ ಕೂಡ ಒಂದು ಎಂಬುದು ನಮಗೆ ಹೆಮ್ಮೆ ಎನಿಸುತ್ತದೆ. ಗಾಂಧೀಜಿ ಉಡುಪಿಗೆ ಬಂದಾಗ ಅವರ ಹೋರಾಟಕ್ಕೆ ಹಾಜಿ ಅಬ್ದುಲ್ಲಾ ಅವರು ಒಂದು ಲಕ್ಷ ರೂ. ಹಣ ದೇಣಿಗೆಯಾಗಿ ನೀಡಿದ್ದರು. ಇದು ಸ್ವಾತಂತ್ರ್ಯ ಹೋರಾಟಕ್ಕೆ ಹಾಜಿ ಅಬ್ದುಲ್ಲಾರು ನೀಡಿದ ಬಹಳ ದೊಡ್ಡ ಕೊಡುಗೆಯಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಹಾಜಿ ಅಬ್ದುಲ್ಲಾ ಸಾಹೇಬರ ಸೇವೆ ಕುರಿತು ಮಾತನಾಡಿದ ಅವಿನಾಶ್ ಕಾಮತ್, ಹಾಜಿ ಅಬ್ದುಲ್ಲ ಸಾಹೇಬರ ಹುಟ್ಟೇ ಒಂದು ಸೇವೆ, ದಾನ, ಧರ್ಮ ಆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಅಪಾರ ಸೇವೆ ನೀಡಿದ ಸಾಹೇಬರ ಹೆಸರು ಇಂದು ನಮ್ಮ ನಗರದ ಒಂದು ಕಿರು ಓಣಿಗೂ ಇಲ್ಲದೇ ಇರುವುದು ದುರಂತ ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 492 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಲಾಗಿದ್ದು, ಅದರಲ್ಲಿ ಹಾಜಿ ಅಬ್ದುಲ್ಲಾರ 30ನೇ ಮನೆಯಾಗಿದೆ. ಮುಂದೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಸಲಾಗುವುದು ಎಂದು ಸಂಘಟಕ ಪ್ರದೀಪ್ ಕುಮಾರ್ ಬಸ್ರೂರು ತಿಳಿಸಿದ್ದಾರೆ.

ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ.ಇಕ್ಬಾಲ್ ಮನ್ನಾ ಈ ವೇಳೆ ಮಾತನಾಡಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ರಾಷ್ಟ್ರಧ್ವಜಕ್ಕೆ ಪುಷ್ಫಾರ್ಚನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ., ಕಾರ್ಪ್ ಬ್ಯಾಂಕ್ ಮ್ಯೂಸಿಯಂ ಉಸ್ತುವಾರಿ ಜಯಪ್ರಕಾಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !