‘Indian Method in Acting’ ಪರಿಷ್ಕೃತ ಪುಸ್ತಕ ಬಿಡುಗಡೆ

ಪಾಶ್ಚಾತ್ಯ ರಂಗಭೂಮಿಯ ಅಭಿನಯದಲ್ಲಿ ನಟರು ತಮ್ಮ ಒಳವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸಿ ಅಭಿನಯಿಸಲು ಯತ್ನಿಸಿದರೆ ಭಾರತೀಯ ರಂಗ ಸಂಪ್ರದಾಯದಲ್ಲಿ ನಟರು ‘ಪಾತ್ರದ’ ಗುಣಗಳನ್ನು ಕಲಿತು ಅಭಿನಯಿಸಲು ಯತ್ನಿಸುತ್ತಾರೆ, ಎಂದು ಖ್ಯಾತ ರಂಗ ನಿರ್ದೇಶಕ ಮತ್ತು ಲೇಖಕ ಪ್ರಸನ್ನ ಹೇಳಿದರು.

ಬಿಡುಗಡೆಗೊಂಡ ತಮ್ಮ ಪರಿಷ್ಕೃತ ಪುಸ್ತಕ ‘Indian Method in Acting’ ಅದರ ಕುರಿತು ಮಾತನಾಡುತ್ತಾ ಈ ಪುಸ್ತಕದಲ್ಲಿ ಪಾಶ್ಚಿಮಾತ್ಯ ಮತ್ತು ಭಾರತೀಯ ರಂಗ ಸಂಪ್ರದಾಯಗಳ ಅಭಿನಯದ ಹೋಲಿಕೆ ಮತ್ತು ಭಿನ್ನತೆಗಳಿವೆ. ಪಾಶ್ಚಾತ್ಯರಲ್ಲಿ ಕಥಾರ್ಸಿಸ್ ಮೂಲಮಂತ್ರವಾದರೆ ಭಾರತದಲ್ಲಿ ರಸ ಸಿದ್ಧಾಂತ ಬೀಜ ಮಂತ್ರವಾಗಿದೆ. ಕಥಾರ್ಸಿಸ್ ಅಭಿವ್ಯಕ್ತಿಗೆ ಒತ್ತುಕೊಟ್ಟರೆ ರಸಸಿದ್ಧಾಂತವು ‘ಸಾಧಾರಣೀಕರಣದ’ ಮೇಲೆ ಒತ್ತುಕೊಟ್ಟಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಧುನಿಕತೆ ಮತ್ತು ಜಾನಪದ ಸಂಪ್ರದಾಯಗಳ ನಡುವೆ ಸಿಕ್ಕು ಇಬ್ಬಂಧಿತನವನ್ನು ಅನುಭವಿಸುತ್ತಿದ್ದ ಭಾರತೀಯ ರಂಗ ಭೂಮಿಗೆ ಬಾದಲ್ ಸರ್ಕಾರ್ ಅಂಥವರು ತನ್ನ ತನದ ಸ್ವಂತಿಕೆಯ ಸ್ಪರ್ಶವನ್ನು ನೀಡಿದರು ಎಂದು ಅವರು ಅಭಿಪ್ರಾಯಪಟ್ಟರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ರಂಗ ಭೂಮಿ(ಉಡುಪಿ)ಯ ಆಶ್ರಯದಲ್ಲಿ ಪ್ರಸನ್ನರವರ ಈ ಪರಿಷ್ಕೃತ ಪುಸ್ತಕ ಬಿಡುಗಡೆಗೊಂಡಿತು. ‘ಶ್ರಮ’ವನ್ನು ಒಂದು ಮೌಲ್ಯವಾಗಿ ತಿಳಿಯುವ ರಂಗ ಭೂಮಿಯ ಇಡೀ ಪ್ರಕ್ರಿಯೆಯೇ ಗಾಂಧೀಜಿಯ ತಾತ್ವಿಕತೆಯಾಗಿದೆ. ಈ ರಂಗ ಪರಂಪರೆಯು ಇಡೀ ಸಮುದಾಯವನ್ನು ಒಳಗೊಂಡಿರುವ ರಂಗ ಪರಂಪರೆ ಎಂದರು. ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಲೇಖಕ ಪ್ರೊ. ಫಣಿರಾಜ್ ಎಲ್ಲಾ ರಂಗ ವಿದ್ಯಾರ್ಥಿಗಳಿಗೆ ಈ ಪುಸ್ತಕ ಒಂದು ಮಾದರಿ ಕೈಪಿಡಿಯು ಮತ್ತು ಚಿಂತನಾಶೀಲವು ಆಗಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಇವರು ಪ್ರಸನ್ನರ ರಂಗ ಸಿದ್ಧಾಂತವು ಅವರ ಅನುಭವದ ಮೂಲಕ ರೂಪುಗೊಂಡಿದೆ ಎಂದರು. ರಂಗ ಭೂಮಿ ತಂಡದ ಪ್ರದೀಪ್ ಚಂದ್ರ ಕುತ್ಪಾಡಿ ಮತ್ತು ಅನೇಕ ರಂಗಾಸಕ್ತರು ಉಪಸ್ಥಿತರಿದ್ದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar