ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೊಳಿಸಿ; ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಒತ್ತಾಯ

ಉಡುಪಿ : ಉಡುಪಿ ಜಿಲ್ಲೆಯ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ವಾಸವಾಗಿರುವ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಜನಾಂಗವಾದ ‘ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘ ಒತ್ತಾಯ ಮಾಡಿದೆ.

ಈ ಕುರಿತು ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ್ ಗೌಡ ಈದು ಅವರು, ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕೃಷಿ ಭೂಮಿ ರಹಿತರಿಗೆ 400 ಎಕರೆ ಜಾಗ ಮೀಸಲಿಡಬೇಕು. ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯದಿಂದ ಸ್ವ ಇಚ್ಛೆಯಿಂದ ಹೊರಬರುವ ಕುಟುಂಬಗಳಿಗೆ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ವಸತಿ ಸಹಿತ ಕೃಷಿ ಭೂಮಿ. ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪರಿಶಿಷ್ಟ ಪಂಗಡ ಒಳ ಮೀಸಲಾತಿ ಜಾರಿಗೊಳಿಸಬೇಕು. ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಅರಣ್ಯ ಇಲಾಖೆಯಲ್ಲಿರುವ ಸ್ಥಳೀಯ ಅರಣ್ಯ ಬುಡಕಟ್ಟು ಮೀಸಲಾತಿಯನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಣೆ ಮಾಡಬೇಕು ಎಂದರು.

ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಯನ್ನು ತಿರಸ್ಕರಿಸಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲಾ ಕುಟುಂಬಗಳಿಗೆ ರಸ್ತೆ, ವಿದ್ಯುತ್, ವಸತಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸಮುದಾಯದಲ್ಲಿ ವೃತ್ತಿ ಶಿಕ್ಷಣ ಪಡೆದವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ನೌಕರಿ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಅರಣ್ಯ ಹಕ್ಕುಪತ್ರ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್ ಕೆರ್ವಾಶೆ, ಉಪಾಧ್ಯಕ್ಷೆ ಶೋಭಾ, ವಕ್ತಾರ ದಿನೇಶ್ ಗೌಡ, ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಗೌಡ ನಾಡ್ವಾಲು ಉಪಸ್ಥಿತರಿದ್ದರು.

Related posts

ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಡಿಕಿನ್ ಸ್ಕೂಲ್ನಲ್ಲಿ ಆರೋಗ್ಯ, ಸಂಸ್ಕೃತಿ ಮತ್ತು ನಾಯಕತ್ವ ಕುರಿತ ಪರಿವರ್ತಕ ಕಾರ್ಯಾಗಾರ

ಸಾರ್ವಜನಿಕ ಸ್ಥಳದಲ್ಲಿ ಮೀನಿನ ನೀರು ಡಂಪ್ : ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಚಾಲಕನಿಂದ ದಂಡ ವಸೂಲಿ, ವಾರ್ನಿಂಗ್

ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ