ಉಡುಪಿ : ಉಡುಪಿ ನಗರಸಭೆ ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಸಂಪರ್ಕದ ಕುಡಿಯುವ ನೀರಿನ ದರದಲ್ಲಿ ಕಡಿತಗೊಳಿಸಲಾಗಿದ್ದು, ಡಿಸೆಂಬರ್ 1 ರಿಂದ ಜಾರಿಯಾಗಲಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.
ನಗರಸಭೆ ಆಡಳಿತಾಧಿಕಾರಿ ಅವಧಿಯಲ್ಲಿ ಅವೈಜ್ಞಾನಿಕ ಕುಡಿಯುವ ನೀರಿನ ದರ ಏರಿಕೆಯಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿರುವ ಹಿನ್ನಲೆಯಲ್ಲಿ ಉಡುಪಿ ಜನತೆಯ ಹಿತದೃಷ್ಟಿಯಿಂದ ಗೃಹ ಬಳಕೆಯ ಸಂಪರ್ಕಕ್ಕೆ ನೀರಿನ ಬಳಕೆಗೆ ಅನುಗುಣವಾಗಿ ಶೇ. 18ರಿಂದ ಶೇ. 25ರವರೆಗೂ ದರ ಕಡಿತ ಮಾಡಲಾಗಿದೆ.
ನಗರ ಸಭೆಯ ಕುಡಿಯುವ ನೀರಿನ ಸಂಪರ್ಕದ ಗೃಹ ಬಳಕೆಯ ಮಾಸಿಕ ಕನಿಷ್ಠ ದರವನ್ನು 88 ರೂಪಾಯಿಗಳಿಂದ 72 ರೂ. ಗಳಿಗೆ ಇಳಿಸಲಾಗಿದೆ. 8000 ಲೀಟರ್ ವರೆಗಿನ ಬಳಕೆಗೆ ಪ್ರತಿ ಸಾವಿರ ಲೀಟರ್ ಗೆ ರೂಪಾಯಿ 11 ರಿಂದ 9ಕ್ಕೆ, 15ಸಾವಿರದವರೆಗೆ ದರವನ್ನು ರೂ 15 ರಿಂದ 12 ಮತ್ತು 25,000ವರೆಗಿನ ದರವನ್ನು ರೂ 20 ರಿಂದ 15 ಕ್ಕೆ ಇಳಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕದ ಬಳಕೆ ಶುಲ್ಕಗಳಲ್ಲೂ ಇಳಿಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.