ಉಡುಪಿ : ಮುಂದಿನ ಐದು ದಿನಗಳ ಕಾಲ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35ರಿಂದ 45ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರಲಿದೆ. ಆದುದರಿಂದ ರಾಜ್ಯದ ಮೂರು ಕರಾವಳಿ ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದರೊಂದಿಗೆ ಜೂ.22ರಿಂದ 24ರ ನಡುವಿನ ಅವಧಿಯಲ್ಲಿ ಸಾಧಾರಣ ದಿಂದ (64.5ಮಿ.ಮೀ-115.5ಮಿ.ಮೀ.)ದಿಂದ ಭಾರೀ ಮಳೆ (115.5 ರಿಂದ 204.4ಮಿ.ಮೀ) ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ 204.4ಮಿ.ಮೀ.ಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ಇದ್ದು ರಾಜ್ಯ ಕರಾವಳಿಯಲ್ಲಿ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ ಎಂದು ಹಮಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ ಇಂದು ಸಂಜೆಯಿಂದ ಜೂ.21ರ ಮಧ್ಯರಾತ್ರಿ 11:30ರವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರಿನವರೆಗೆ, ಉಡುಪಿ ಜಿಲ್ಲೆಯ ಬೈಂದೂರಿನಿಂದ ಕಾಪುವಿನವರೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಮಜಲಿವರೆಗಿನ ಕಡಲಿನಲ್ಲಿ 2.0ಮೀ.ನಿಂದ 2.7ಮೀ.ವರೆಗಿನ ಎತ್ತರದ ಸಮುದ್ರದಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.