ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ

ಮಂಗಳೂರು : ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪುತ್ತೂರು ಕಬಕದ ನಿವಾಸಿ ನಿತೇಶ್ (30) ಶಿಕ್ಷೆಗೊಳಗಾದವನು. ಈತನ ಜತೆಗೆ ಈತನ ತಂದೆ ರಾಮಣ್ಣ ಪೂಜಾರಿ (62) ಮತ್ತು ಬಾವ ನಿಖಿತಾಶ್ ಸುವರ್ಣ (40)ನಿಗೆ ಐದು ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಆರೋಪ:

ನಿತೇಶ್ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಸುತ್ತಾಡಿಸಿ ಬಳಿಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಆಕೆಯ ಮನೆಗೂ ಹೋಗಿ ಅತ್ಯಾಚಾರವೆಸಗಿದ್ದ. ಯುವತಿ ವಿವಾಹವಾಗಲು ಕೇಳಿಕೊಂಡಾಗ ಆತ ನಿರಾಕರಿಸಿದ್ದ.

ನ್ಯಾಯಾಲಯದ ತೀರ್ಪು:

ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ನಿತೇಶ್‌ಗೆ ಭಾರತೀಯ ದಂಡಸಂಹಿತೆಯ ಕಲಂ 376 (2) (ಎನ್) ಅಡಿಯಲ್ಲಿ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಕಲಂ 418ರ ಅಡಿಯಲ್ಲಿ 1 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತಂದೆ ಮತ್ತು ಬಾವನಿಗೆ ಶಿಕ್ಷೆ:

ರಾಮಣ್ಣ ಪೂಜಾರಿ ಮತ್ತು ನಿಖಿತಾಶ್‌ಗೆ ಭಾರತೀಯ ದಂಡ ಸಂಹಿತೆಯ ಕಲಂ 504 ರಡಿ 1 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ಭಾ.ದಂ.ಸ ಕಲಂ 506ರಡಿ 5 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪರಿಹಾರ:

ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ.

Related posts

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ

ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ಕರುವನ್ನು ನದಿಗೆ ಎಸೆದ ಗೋಕಳ್ಳರು