ನ.16ರಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ “ರಂಗಭಾಷೆ” ಕಾರ್ಯಾಗಾರ

ಉಡುಪಿ : ರಂಗಭೂಮಿ ಉಡುಪಿ ಆಶ್ರಯದಲ್ಲಿ ಯಕ್ಷ ರಂಗಾಯಣ ಕಾರ್ಕಳ ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ “ರಂಗಭಾಷೆ” ನಾಟಕವೆಂದರೆ ಏನು, ಯಾಕೆ ಮತ್ತು ಹೇಗೆ? ಎಂಬ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವವನ್ನು ಇದೇ ನ.16ರಿಂದ 18ರ ವರೆಗೆ ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಿಗ್ಗೆ 11ಗಂಟೆಗೆ ರಂಗನಿರ್ದೇಶಕ ಪ್ರಸನ್ನ ಶಿಬಿರವನ್ನು ಉದ್ಘಾಟಿಸಿ, ಆಶಯ ಭಾಷಣ ಮಾಡಲಿದ್ದಾರೆ. ರಂಗಭೂಮಿ ಉಡುಪಿ ಗೌರವಾಧ್ಯಕ್ಷ, ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ನಟ ಹಾಗೂ ನಿರ್ದೇಶಕ ಮಂಡ್ಯ ರಮೇಶ್, ಕಲ್ಯಾಣಪುರ ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕ ಫರ್ಡಿನಾಡ್ ಗೋನ್ಸಾಲ್ವಿಸ್, ರಂಗ ಸಮಾಜದ ಸದಸ್ಯ ಶಶಿಧರ ಭಾರಿಘಾಟ್, ರಂಗನಿರ್ದೇಶಕಿ ಶ್ವೇತಾರಾಣಿ ಎಚ್. ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ, ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಶ್ರೀ ವೆಂಕಟರಮಣ ಐತಾಳ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ನಾಗಾಭರಣ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಕೆ. ಜಿ. ಕೃಷ್ಣಮೂರ್ತಿ, ಶ್ರೀಪಾದ ಭಟ್, ಮಂಜು ಕೊಡಗು, ವಿನೀತ್ ಕುಮಾರ್, ಶ್ವೇತಾ ಎಚ್. ಕೆ. ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಮಿಲಾಗ್ರಿಸ್ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಮೂರು ದಿನಗಳ ವಸತಿಸಹಿತ ಶಿಬಿರದಲ್ಲಿ ಒಂದು ನೂರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಅಭಿನಯ ದರ್ಪಣ ಚಿಕ್ಕಮಗಳೂರು ತಂಡದಿಂದ ‘ಮುಸ್ಸಂಜೆಯಲ್ಲಿ ನಡೆದ ಘಟನೆ’, ಕಿನ್ನರ ಮೇಳ ತುಮರಿ ತಂಡದಿಂದ ‘ಇರುವೆ ಪುರಾಣ’, ಭಳಿರೇ ವಿಚಿತ್ರಂ ತಂಡದಿಂದ ‘ದಶಾನನ ಸ್ವಪ್ನ ಸಿದ್ದಿ’ ಹಾಗೂ ಒಡನಾಡ ತಂಡದಿಂದ ‘ಆನೆ ಡಾಕ್ಟರ್’ ನಾಟಕಗಳು ಪ್ರದರ್ಶನಗೊಳ್ಳಲಿವೆ. ನ. 18ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು, ರವೀಂದ್ರ ನಾಯಕ್, ಕಾರ್ಯಾಗಾರದ ಸಹ ಸಂಚಾಲಕಿ ರೇವತಿ‌ ನಾಡಿಗೇರ್ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ