ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ವಿವೇಕ ನೀಡುವ ಶಿಕ್ಷಣ ಒದಗಿಸಿ : ಮೋಹನ್ ಭಾಗವತ್

ಮಂಗಳೂರು : ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ವಿವೇಕವನ್ನು ನೀಡುವ ಶಿಕ್ಷಣ ಒದಗಿಸಬೇಕು, ಇದರಿಂದ ವಸುದೈವ ಕುಟುಂಬಕಂ ಎಂಬ ಭಾವನೆಯಿಂದ ಜೀವಿಸಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ಸಂಜೆ ಹೊನಲು ಬೆಳಕಿನ ಕ್ರೀಡೋತ್ಸವ ಉದ್ಘಾಟಿಸಿ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಬಳಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇಂಥ ಸುಂದರ, ವಿಭಿನ್ನ ಪ್ರಕಾರದ ಕಾರ್ಯಕ್ರಮಕ್ಕೆ ಎಲ್ಲರ ಕೊಡುಗೆ ಇದೆ. ಇದಕ್ಕೆ ಎಲ್ಲರೂ ಅಭಿನಂದನಾರ್ಹರು. ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಪಂಚಕೋಶದ ಆಧಾರದಲ್ಲಿ ಇದನ್ನು ರೂಪಿಸಲಾಗಿದೆ. ಆದರೆ, ಕಲ್ಲಡ್ಕದಲ್ಲಿ ಇದು ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಶ್ಲಾಘಿಸಿದರು.

ಶಿಕ್ಷಣ ಕೇವಲ ಹೊಟ್ಟೆಪಾಡಿಗೆ ಮಾಡುವುದಲ್ಲ. ಇಲ್ಲಿ ಸರ್ವಾಂಗೀಣ ವಿಕಾಸವೂ ಆಗಬೇಕು ಎಂದು ಸಲಹೆ ನೀಡಿದ ಭಾಗವತ್, ಮನುಷ್ಯ ತನ್ನ ಕಾಲ ಮೇಲೆ ನಿಂತುಕೊಳ್ಳುವಂತಾಗುವ ವ್ಯಾವಹಾರಿಕ ಜ್ಞಾನ ಶಿಕ್ಷಣದಲ್ಲಿ ಅಡಕವಾಗಿರಬೇಕು. ಶಿಕ್ಷಣ ಪಡೆದವನಿಗೆ ವಿವೇಕವೂ ಇರಬೇಕು ಎಂದರು.

ವಿದ್ಯೆಯನ್ನು ಸರಿಯಾಗಿ ಬಳಸುವ ವಿವೇಕವನ್ನು ಶಿಕ್ಷಣ ನೀಡಬೇಕು. ಸೃಷ್ಟಿಯಲ್ಲಿರುವ ಎಲ್ಲರನ್ನು ಸ್ನೇಹದಿಂದ ನೋಡುವ ದೃಷ್ಟಿಕೋನ ಬೇಕು. ಯಾರು ನಮಗೆ ತೊಂದರೆ ನೀಡುತ್ತಾರೆ ಅವರನ್ನು ಎದುರಿಸುವಂಥ ಶಿಕ್ಷಣ ಬೇಕು. ಬಲವನ್ನು ದುರ್ಬಲರ ರಕ್ಷಣೆಗೆ ಬಳಸಿ. ಹಣದ ಉಪಯೋಗ ದಾನಕ್ಕೆ ಬಳಸಿ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹಕಾರ್ಯವಾಹ ಮುಕುಂದ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಉಮಾನಾಥ ಕೋಟ್ಯಾನ್, ಹರೀಶ ಪೂಂಜ, ಭಾಗೀರಥಿ ಮುರುಳ್ಯ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಅಜಿತ್ ಕುಮಾರ್ ಎಸ್ ಜೈನ್, ಡಾ.ಕೃಷ್ಣಪ್ರಸಾದ್ ಕೂಡ್ಲು, ಹರಿಶ್ಚಂದ್ರ ಸನಿಲ್ ಡಾ.ವಿ.ಎಸ್.ವಿ.ಪ್ರಸಾದ್, ಪ್ರಕಾಶ್ ಶೆಟ್ಟಿ ಬಂಜಾರ, ಡಾ.ಸೂರಜ್ ಗೋಪಾಲ್ ಎರ್ಮಾಳ್, ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಸ್ವಾಗತಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮೂಹ ಪ್ರದರ್ಶನದಲ್ಲಿ ಆರೆಸ್ಸೆಸ್ 100 ಎಂಬ ರಚನೆ ಮಾಡಿದರು. ಅಯೋಧ್ಯೆ ಶ್ರೀರಾಮಜನ್ಮಸ್ಥಾನದಲ್ಲಿ ಬಾಲರಾಮ ಸ್ಥಾಪನೆಯ ಮರುದೃಶ್ಯಾವಳಿಯನ್ನು ಮಾಡಲಾಯಿತು.

ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ವೇಷಧಾರಿಗಳು ಪ್ರತಿಷ್ಠಾ ಕಾರ್ಯ ನೆರವೇರಿಸುವ ಹಾಗೂ ಶ್ರೀರಾಮನ ಪೂಜೆ ಮಾಡುವ ದೃಶ್ಯ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶ್ರೀರಾಮ ಭಜನೆ ಮಾಡಿ ಗಮನ ಸೆಳೆದರು. ಇಸ್ರೋದಿಂದ ಉಡಾವಣೆಗೊಂಡ ರಾಕೆಟ್ ಪ್ರತಿಕೃತಿಯೊಂದಿಗೆ ಚಂದ್ರಯಾನದ ಪ್ರಾತ್ಯಕ್ಷಿಕೆ, ಬೆಂಕಿಯ ಗೋಲದಲ್ಲಿ ಹಾರುವುದು ಗಮನ ಸೆಳೆಯಿತು.
ಹಿರಿಯ ಆರೆಸ್ಸೆಸ್ ಮುಖಂಡ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ರಾಷ್ಟ್ರನಿರ್ಮಾಣದ ಕಲ್ಪನೆ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸುವಂತೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ಯುವಪೀಳಿಗೆಯನ್ನು ತಯಾರು ಮಾಡುತ್ತಿರುವುದಾಗಿ ಹೇಳಿದರು.

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪದವಿಕಾಲೇಜು, ಸೆಕೆಂಡರಿ ಸ್ಕೂಲ್, ಪದವಿಪೂರ್ವ ಕಾಲೇಜು, ಹೈಸ್ಕೂಲು ಹಾಗೂ ಪ್ರಾಥಮಿಕ ಶಾಲೆ ಹಾಗೂ ಶಿಶುಮಂದಿರಕ್ಕೆ ಸೇರಿದ 3338 ವಿದ್ಯಾರ್ಥಿಗಳು ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಭಾಗಿಯಾಗಿ ನಾನಾ ರೀತಿಯ ಪ್ರದರ್ಶನಗಳನ್ನು ಈ ಸಂದರ್ಭ ನೀಡಿದರು. ಇವರಲ್ಲಿ 20 ಮಂದಿ ವಿಶೇಷಚೇತನ ಮಕ್ಕಳೂ ಭಾಗವಹಿಸಿದ್ದು, ಇವುಗಳನ್ನು ವೀಕ್ಷಿಸಿದ ಡಾ. ಮೋಹನ್ ಭಾಗವತ್, ಮಕ್ಕಳ ಕ್ರೀಡಾಸ್ಫೂರ್ತಿಯನ್ನು ಶ್ಲಾಘಿಸಿದರು.

ಶಿಶುನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಹಾಡಿನಲ್ಲಿ ಚಿತ್ತಾರ, ನೃತ್ಯಭಜನೆ, ಮಲ್ಲಕಂಭ, ತಿರುಗುವ ಮಲ್ಲಕಂಭ, ಕೇರಳ ಶೈಲಿ ವಾದ್ಯನಾದನ, ನೃತ್ಯವೈವಿಧ್ಯ, ಚಕ್ರ ಸಮತೋಲನ, ಕಾಲ್ಚಕ್ರ, ಕೂಪಿಕಾ ಸಮತೋಲನ ಸಹಿತ ಸುಮಾರು 18 ಪ್ರದರ್ಶನಗಳನ್ನು ಸುಮಾರು 3338 ವಿದ್ಯಾರ್ಥಿಗಳು ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ