ಬ್ರಹ್ಮಾವರದಲ್ಲಿ ತಕ್ಷಣ ಸರ್ವಿಸ್ ರಸ್ತೆ ಆರಂಭಿಸದೇ ಇದ್ದಲ್ಲಿ ಎ. 29 ರಂದು ಉಗ್ರ ಪ್ರತಿಭಟನೆ : ಅಲ್ವಿನ್ ಅಂದ್ರಾದೆ

ಬ್ರಹ್ಮಾವರ : ಬ್ರಹ್ಮಾವರದಲ್ಲಿ ತಕ್ಷಣ ಸರ್ವಿಸ್ ರಸ್ತೆ ಆರಂಭಿಸದೇ ಇದ್ದಲ್ಲಿ ಎಪ್ರಿಲ್ 29‌ರಂದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಫ್ಲೈ‌ಓವರ್ ಹೋರಾಟ ಸಮಿತಿಯ ಅಲ್ವಿನ್ ಅಂದ್ರಾದೆ ಅವರು ಬ್ರಹ್ಮಾವರದ ಗಜಾನನ ಹೋಟೆಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಎಸ್.ಎಮ್.ಎಸ್ ಮುಂಭಾಗ ಅಮಾಯಕ ವಿದ್ಯಾರ್ಥಿ ಬಲಿಯಾದಾಗ ಪ್ರತಿಭಟನೆ ನಡೆಸಿದ್ದೇವೆ. ನಂತರ ಸಭೆ ಸೇರಿ ಹೋರಾಟಕ್ಕಾಗಿಯೇ ಫ್ಲೈ‌ಓವರ್ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದು ಸಮಿತಿಯ ಸಭೆಯಲ್ಲಿ ಹೋರಾಟಕ್ಕೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಈಗಾಗಲೇ ರೂ.90 ಕೋಟಿ ವೆಚ್ಚದಲ್ಲಿ ಮಾಬುಕಳ ಸೇತುವೆಯಿಂದ ಭದ್ರಗಿರಿ ತನಕ ಸರ್ವಿಸ್ ರಸ್ತೆಗೆ ಟೆಂಡರ್ ಕೂಡ ಆಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ದೊರಕಿದೆ.

ಸಂಸದರು ನಮ್ಮ ಮನವಿಗೆ ಸ್ಪಂದಿಸಿ ಸರ್ವಿಸ್ ರಸ್ತೆ ಹಾಗೂ ಫ್ಲೈ‌ಓವರ್‌ಗೆ ಭರವಸೆ ನೀಡಿದ್ದಾರೆ. ಕಳೆದ ಬಾರಿ ಹೋರಾಟದ ಸಂದರ್ಭ ಒಂದು ವಾರದಲ್ಲಿ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್. ತನಕ ತಾತ್ಕಾಲಿಕ ಸರ್ವಿಸ್ ರಸ್ತೆಯನ್ನು ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕೆಲಸ ಆರಂಭಿಸಿಲ್ಲ. ಪ್ರತಿ ದಿನ ಸುಮಾರು 2000 ವಿದ್ಯಾರ್ಥಿಗಳು ಎಸ್.ಎಮ್.ಎಸ್.ವರೆಗೆ ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡುತ್ತಾರೆ. ಆದ್ದರಿಂದ ತಾತ್ಕಾಲಿಕ ಸರ್ವಿಸ್ ರಸ್ತೆಯನ್ನು ಎ.27ರೊಳಗೆ ಆರಂಭಿಸದೇ ಇದ್ದಲ್ಲಿ ಎ.29ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಸುಮಾರು 4000 ಮಕ್ಕಳಿಗೆ ಮಳೆಗಾಲದಲ್ಲಿ ರಸ್ತೆ ದಾಟಲು ತುಂಬಾ ತೊಂದರೆಯಾಗಲಿದೆ. ಕೂಡಲೆ ಮಣ್ಣು ಹಾಕಿ ಸರ್ವಿಸ್ ರಸ್ತೆ ಆರಂಭಿಸಬೇಕು.

ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ದಿನಕ್ಕೆ ಕನಿಷ್ಟ 10 ಮಂದಿಯಾದರೂ ಬೀಳುತ್ತಾರೆ. ಆಕಾಶವಾಣಿಯಲ್ಲಿ ರಸ್ತೆ ಏರಿಸಿ ತೊಂದರೆಯಾಗುತ್ತಿದೆ. ಅದನ್ನು ತಗ್ಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ನುಡಿದರು.

ನಮ್ಮ ಹಿಂದಿನ ಹೋರಾಟದಿಂದ ಎಚ್ಚೆತ್ತು ಅಧಿಕಾರಿಗಳು ಸರ್ವಿಸ್ ರಸ್ತೆ ಆರಂಭಿಸುತ್ತೇವೆ ಎಂದು ಜೆಸಿಬಿ ತಂದು ನಿಲ್ಲಿಸಿ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿ ಜೆಸಿಬಿ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎ.29ರೊಳಗೆ ತಾತ್ಕಾಲಿಕ ಸರ್ವಿಸ್ ರಸ್ತೆಯ ಕೆಲಸ ಆರಂಭಿಸದೇ ಇದ್ದಲ್ಲಿ ವಿದ್ಯಾರ್ಥಿಗಳು ಹಾಗೂ ಬ್ರಹ್ಮಾವರದ ನಾಗರಿಕರನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಫ್ಲೈ‌ಓವರ್ & ಸರ್ವಿಸ್ ರಸ್ತೆ ನಿರ್ಮಾಣ ಆಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ ಎಂದು ವಸಂತ್ ಗಿಳಿಯಾರ್ ತಿಳಿಸಿದರು.

ಮಾಹಿತಿ ಹಕ್ಕು ಹೋರಾಟಗಾರ ಸದಾಶಿವ ಶೆಟ್ಟಿ ಮಾತನಾಡಿ ಹೆದ್ದಾರಿಯ ಅವೈಜ್ಞಾನಿಕ ನಿರ್ಮಾಣದಿಂದ 2019ರಿಂದ 2029ರವರೆಗೆ ಬ್ರಹ್ಮಾವರದಲ್ಲಿ 95 ಅಪಘಾತಗಳಾಗಿದ್ದು 69 ಮಂದಿಗೆ ಮರಣಾಂತಿಕ ಗಾಯಗಳಾಗಿದ್ದು, 26 ಮಂದಿ ಅಸು ನೀಗಿದ್ದಾರೆ. ಈ ರೀತಿಯ ಅಪಘಾತಗಳನ್ನು ತಪ್ಪಿಸಬೇಕಾದ್ರೆ ತಕ್ಷಣ ಸರ್ವಿಸ್ ರಸ್ತೆ ಹಾಗೂ ಫ್ಲೈ‌ಓವರ್ ನಿರ್ಮಾಣವಾಗಬೇಕೆಂದರು.

ಶ್ಯಾಮರಾಜ್ ಬಿರ್ತಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಎಕ್ಸ್‌ಪ್ರೆಸ್ ಬಸ್‌ನವರು ಬಸ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಹೀಗೆ ಬಸ್ ನಿಲ್ಲಿಸಲು ಅವಕಾಶವಿಲ್ಲ. ಇಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಹರೀಶ್ ಕುಂದರ್, ಉದಯಕುಮಾರ್, ಸಂಕಯ್ಯ ಶೆಟ್ಟಿ, ಜೋಸೆಫ್ ಸುವಾರಿಸ್, ವಿಕ್ರಮ್‌ಪ್ರಭು ಉಪಸ್ಥಿತರಿದ್ದರು.

Related posts

ಸಂಘಟಿತವಾಗಿ ಸರಕಾರಿ ಶಾಲೆಗಳನ್ನು ಉಳಿಸೋಣ – ಶಾಸಕ ಗಂಟಿಹೊಳೆ ಕರೆ

ಭಾರತ ಸರ್ಕಾರ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ – ಸುನಿಲ್ ಕುಮಾರ್

37 ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ಆಶಯ ಪತ್ರ ವಿತರಣೆ : ಸಿಇಓ ಬಾಯಲ್