ಕಾಂಗ್ರೆಸ್ಸಿನ ದಬ್ಬಾಳಿಕೆ ರಾಜಕಾರಣ ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

ಉಡುಪಿ : ಕಾಂಗ್ರೆಸ್ಸಿನ ದಬ್ಬಾಳಿಕೆ ರಾಜಕಾರಣ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪದಲ್ಲಿ ತೊಡಗಿದೆ. ಪರಶುರಾಮ ಪ್ರತಿಮೆ ನಿರ್ಮಿಸಿದ ಶಿಲ್ಪಿಯ ಬೆಂಗಳೂರಿನ ಮನೆಗೆ ತೆರಳಿ ಕಾಂಗ್ರೆಸ್‌ನ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ದೂರಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಕರಾವಳಿಯ ಸೃಷ್ಟಿಕೃತ ಪರಶುರಾಮನ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿದರೆ ಕಾಂಗ್ರೆಸ್ ನವರಿಗೆ ಏಕೆ ಹೊಟ್ಟೆಉರಿ? ದೇಶದ ಇತಿಹಾಸ, ರಾಮ ದೇವರು, ಹಿಂದುತ್ವವನ್ನು ಒಪ್ಪುವುದಿಲ್ಲ‌ ಎಂಬುವುದು ಕಾಂಗ್ರೆಸನವರ ನಡುವಳಿಕೆಯಿಂದ ಪದೇ ಪದೇ ಸಾಬೀತಾಗುತ್ತಿದೆ. ಬೆಂಗಳೂರಿನಿಂದ-ಮೈಸೂರಿನವರೆಗೆ ನಡೆದ ಬಿಜೆಪಿ ಪಾದಯಾತ್ರೆಯಿಂದ ಕಾಂಗ್ರೆಸ್‌ನ ಹಗರಣಗಳು ಲೋಕಕ್ಕೆ ಗೊತ್ತಾಗಿದೆ. ಇದರಿಂದ ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಹೀಗಾಗಿ ಅವರೇ ಸೃಷ್ಟಿಸಿರುವ ಪರಶುರಾಮ ಥೀಮ್ ಪಾರ್ಕ್ ಪ್ರಕರಣದ ತನಿಖೆಗೆ ವೇಗ ನೀಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರಕಾರದಲ್ಲಿ ಎಲ್ಲ ಸಾಧ್ಯತೆಗಳಿರುತ್ತದೆ‌. ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಅವರನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿಕೊಂಡರು ಅಚ್ಚರಿ ಪಡಬೇಕಾಗಿಲ್ಲ. ಕಾಂಗ್ರೆಸ್ ಹಾಗೂ ಪೊಲೀಸ್ ಇಲಾಖೆ ಒಂದೇ ಆದ್ದರಿಂದ ಸ್ವಲ್ಪ ದಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲಿ ಎನ್ನುವ ಕಾರಣಕ್ಕೆ ಉದಯಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಿಕೊಂಡಿದ್ದಾರೋ ಏನು ಗೊತ್ತಿಲ್ಲ‌. ಅದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದರು.

ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಉದಯಕುಮಾರ್ ಶೆಟ್ಟಿ ಅವರಿಗೆ ಕಾರ್ಕಳದಲ್ಲಿ ಪರಶುರಾಮನ ಮೂರ್ತಿ ನಿರ್ಮಾಣ ಆಗಬೇಕಂತಿಲ್ಲ‌. ಅವರಿಗೆ ಬೇಕಿರುವುದು ರಾಜಕೀಯ ಲಾಭ ಅಷ್ಟೇ. ಅಯೋಧ್ಯೆಯ ರಾಮನ ಮೂರ್ತಿಯನ್ನು ವರ್ಷಾನು‌ಗಟ್ಟಲೇ ಟೆಂಟ್‌ನಲ್ಲಿ ಇಟ್ಟ ಕಾಂಗ್ರೆಸ್‌ನವರು, ಇಂದು ಪರಶುರಾಮನ ಮೂರ್ತಿಯನ್ನು ಕಾರ್ಕಳ ಪೊಲೀಸ್ ಠಾಣೆಯ ಗೋಡೌನಲ್ಲಿ‌ ಹಾಕಿದ್ದಾರೆ ಎಂದು ಆರೋಪಿಸಿದರು‌.

ಪರಶುರಾಮ ಮೂರ್ತಿ ಕೆತ್ತಿದ ಶಿಲ್ಪಿ ಕೃಷ್ಣ ನಾಯ್ಕ್ ಅವರ ಬೆಂಗಳೂರಿನ ಮನೆಗೆ ಹೋಗಿರುವ ಪೊಲೀಸರು ನಾಟಕ ಪ್ರಹಸನ ಮಾಡಿದ್ದಾರೆ. ಪೊಲೀಸರೊಂದಿಗೆ ಉದಯಕುಮಾರ್ ಶೆಟ್ಟಿ ಅವರು ಕೂಡ ಹೋಗಿದ್ದು, ಅವರ ನಿರ್ದೇಶನದಂತೆ ಅಲ್ಲಿ ಚಟುವಟಿಕೆ ನಡೆದಿದೆ. ಅವರಿಗೆ ತನಿಖಾ ಸಂಸ್ಥೆಯಲ್ಲಿ‌ ಯಾವ ಜವಾಬ್ದಾರಿ ಇದೆ. ಸರಕಾರದಲ್ಲಿ ಯಾವ ಸ್ಥಾನ ಇದೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಮುಖಂಡರಾದ ಮಹಾವೀರ ಹೆಗ್ಡೆ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಕಿರಣ್ ಕುಮಾರ್ ಮೊದಲಾದವರು ಇದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್