ಕೋಟ : ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಕಾವಡಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಕಾವಡಿ ಪ್ರಾಥಮಿಕ ಉಪಕೇಂದ್ರದ ಸಮೀಪ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಉದಯಚಂದ್ರ ಶೆಟ್ಟಿ, ಘಟಕ ನಿರ್ಮಾಣಕ್ಕೆ ಗ್ರಾಮಸ್ಥರ ಪರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮವು ತನ್ನದೇ ಆದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಇಲ್ಲಿಯ ಶೇಕಡ 90 ಭಾಗ ಜನರು ಕೃಷಿ ಹಾಗೂ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದ್ದು, ಜನನಿಬಿಡ ಪ್ರದೇಶವಾಗಿದೆ. ಅಂಗನವಾಡಿ ಕೇಂದ್ರ, ಸಮುದಾಯ ಆರೋಗ್ಯ ಉಪಕೇಂದ್ರ ಮತ್ತು ಶತಮಾನಕ್ಕೂ ಹಳೆಯದಾದ ದೇವಸ್ಥಾನ, ದೈವಸ್ಥಾನ, ಹಾಗೂ ಗರಡಿಗಳಿವೆ. ಇಲ್ಲಿಯ ಜನರು ಹೆಚ್ಚಾಗಿ ಬಾವಿ ಹಾಗೂ ಕೆರೆಯ ನೀರನ್ನು ಕೃಷಿ ಮಾಡಲು ಮತ್ತು ಕುಡಿಯಲು ಉಪಯೋಗಿಸುತ್ತಿದ್ದಾರೆ, ಹೀಗಿರುವಾಗ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ವಿಚಾರ ಬೆಳಕಿಗೆ ಬಂದಿದೆ. ಇಂತಹ ಘಟಕ ನಿರ್ಮಾಣದಿಂದ ನಮ್ಮ ಗ್ರಾಮಕ್ಕೆ ಮಲೇರಿಯಾ, ಡೆಂಗ್ಯೂ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಂದ ಗ್ರಾಮಸ್ಥರ ಆರೋಗ್ಯದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಇದರ ವಾಸನೆಯಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಆದ್ದರಿಂದ ನಮ್ಮ ಗ್ರಾಮಕ್ಕೆ ಕಿಂಚಿತ್ತೂ ಅವಶ್ಯಕತೆಯಿಲ್ಲದ ಈ ಮಲತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ನಿರ್ಣಯವನ್ನು ಈ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಗ್ರಾ.ಪಂ ಪ್ರಮುಖರು, ಘಟಕದ ಸ್ಥಳ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. ನಿಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದರು.