ಸ್ಮಾರ್ಟ್ ನಗರದ ಕಳಪೆ ಕಾಮಗಾರಿ; ಸಾಮಾನ್ಯ ಮಳೆಗೇ ಮಂಗಳೂರಿನಲ್ಲಿ ಮುಳಿಹಿತ್ಲುವಿನ ರಿವರ್‌ಫ್ರಂಟ್ ತಡೆಗೋಡೆ ಕುಸಿತ

ಮಂಗಳೂರು : ಕಡಲ ನಗರಿ ಮಂಗಳೂರು ಈಗ ಸ್ಮಾರ್ಟ್ ನಗರಿಯಾಗಿ ರೂಪುಗೊಳ್ಳುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಇತ್ತೀಚೆಗೆ ಸುರಿದ ಸಾಮಾನ್ಯ ಮಳೆಗೆ ಸ್ಮಾರ್ಟ್ ಸಿಟಿ ಕಾಮಗಾರಿಯ ರಿವರ್‌ಫ್ರಂಟ್ ತಡೆಗೋಡೆಯೇ ಕುಸಿದು ನೀರುಪಾಲಾಗಿದೆ.

ನಗರದ ಮುಳಿಹಿತ್ಲುವಿನ ನದಿತೀರದಲ್ಲಿ ರಿವರ್‌ಫ್ರಂಟ್ ಯೋಜನೆಗಾಗಿ ತಡೆಗೋಡೆ ಕಾಮಗಾರಿ ನಡೆದಿತ್ತು. ಆದರೆ ಇತ್ತೀಚೆಗೆ ಸುರಿದ ಸಾಮಾನ್ಯ ಮಳೆಗೇ ಈ ತಡೆಗೋಡೆ ಕುಸಿದುಬಿದ್ದಿದ್ದು, ಇದು ಮಂಗಳೂರು ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. 70 ಕೋಟಿ ರೂ. ವೆಚ್ಚದಲ್ಲಿ ಈ ರಿವರ್ ಫ್ರಂಟ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈ ಕಾಮಗಾರಿಯನ್ನು ತಕ್ಷಣ ತಡೆನೀಡಬೇಕೆಂದು ಎನ್ಇಸಿಎಫ್ ಪರಿಸರವಾದಿ ತಂಡ ಎನ್‌ಜಿಟಿಗೆ ದೂರು ನೀಡಿತ್ತು. ಇದೀಗ 14.5ಕೋಟಿ ರೂ. ವೆಚ್ಚದಲ್ಲಿ ನಡೆದ ಕಾಮಗಾರಿ ಕುಸಿದಿದೆ.

ತಡೆಗೋಡೆಗೆ ಹಾಕಿರುವ ಸಿಮೆಂಟ್ ಕೈಯಲ್ಲಿಯೇ ಕಿತ್ತು ಬರುತ್ತಿದೆ‌‌. ಸಾಮಾನ್ಯ ಮಳೆಗೇ ಕಾಮಗಾರಿ ಕುಸಿದರೆ, ಮುಂದೆ ಸುರಿಯುವ ಧಾರಕಾರ ಮಳೆಗೆ ಸಂಪೂರ್ಣ ಕಾಮಗಾರಿಯೇ ನೀರು ಪಾಲಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಮಾರ್ಟ್ ಸಿಟಿ ಹಣವನ್ನು ಗುಳುಂ ಸ್ವಾಹ ಮಾಡುವ ಪರಿಣಾಮ ಕಳಪೆ ಕಾಮಗಾರಿ ಆಗುತ್ತಿದೆ. ಇತ್ತ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ಮೇಲೆ ಯಾವ ಕ್ರಮವೂ ಆಗಿಲ್ಲ ಎಂದು ಪರಿಸರವಾದಿಗಳು ದೂರು ನೀಡುತ್ತಿದ್ದಾರೆ.

ಈ ರಿವರ್ ಫ್ರಂಟ್ ಯೋಜನೆ ಆರಂಭವಾದಾಗಲೇ ಪರಿಸರವಾದಿಗಳು ಅದನ್ನು ವಿರೋಧಿಸಿದ್ದರು. ಆದರೆ ಈ ವಿರೋಧದ ನಡುವೆಯೂ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇದೀಗ ಆಗಿರುವ ಒಂದಷ್ಟು ಕಾಮಗಾರಿಯೂ ಕುಸಿದಿದೆ. ಈ ಮೂಲಕ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ಕೆ ಬಂದಿರುವ ಸಾವಿರಾರು ಕೋಟಿ ರೂಪಾಯಿ ವೃಥಾ ಪೋಲಾಗುತ್ತಿರುವುದಂಥೂ ಸತ್ಯ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು