ಯಕ್ಷ ಸಾಧಕರಿಗೆ ಪೂಲ ವಿಠಲ ಶೆಟ್ಟಿ ಪ್ರಶಸ್ತಿ

ಮಂಗಳೂರು : ಕಟೀಲು ಮೇಳದ ಭಾಗವತ ಅಂಡಾಲ ದೇವಿ ಪ್ರಸಾದ ಆಳ್ವ ಹಾಗೂ ಬಣ್ಣದ ವೇಷಧಾರಿ ಸುರೇಶ ಕುಪ್ಪೆಪದವು ಅವರಿಗೆ ಈ ವರ್ಷದ “ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ”ಯನ್ನು ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಪಡುಬಿದ್ರೆ ಕಲ್ಲಟೆಗುತ್ತು ಮೂಲ ಕುಟುಂಬಸ್ಥರಾದ ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳ ಶ್ರೀ ಕಟೀಲು ಮೇಳದ 28ನೇ ವರ್ಷದ ಸೇವೆ ಬಯಲಾಟದ ವೇದಿಕೆಯಲ್ಲಿ ವಿತರಿಸಲಾಯಿತು.

ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು, ಪರಾಧೀನವಾಗಿದ್ದ ಕಟೀಲು ಮೂಲ ಕುದುರನ್ನು ಶ್ರೀ ಕ್ಷೇತ್ರಕ್ಕೆ ಮರಳಿಸಿದ ದಾನಿಗಳಾದ ಪೂಲ ವಿಠ್ಠಲ ಶೆಟ್ಟಿ ಪರಿವಾರದ ಸೇವೆಯನ್ನು ಸ್ಮರಿಸಿದರು.

ಕದ್ರಿ ನವನೀತ ಶೆಟ್ಟಿ ಅವರು “ಅಂಡಾಲ ದೇವೀ ಪ್ರಸಾದ ಅವರು ಕಳೆದು ಮೂರುವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಂಗ ರಚನೆ ಹಾಗೂ ಭಾಗವತಿಕೆಯಲ್ಲಿ ಪ್ರಬುದ್ಧತೆ ಮೆರೆದವರು. ತೆಂಕು ಹಾಗೂ ಬಡಗು ತಿಟ್ಟಿನ ಟೆಂಟ್ ಮೇಳಗಳಲ್ಲೂ ಅವರ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಂಡಿವೆ. ಕಟೀಲು ಮೇಳದಲ್ಲೇ ಬಣ್ಣದ ವೇಷಧಾರಿಯಾಗಿ ರೂಪುಗೊಂಡು ಕಳೆದ 35 ವರ್ಷ‌ಗಳಿಂದ ಕಲಾ ಸೇವೆಗೈಯ್ಯುತ್ತಿರುವ ಸುರೇಶ ಕುಪ್ಪೆಪದವು ಅವರು ಮಹಿಷಾಸುರ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ” ಎಂದು ಅಭಿನಂದಿಸಿದರು.

ಕಂಬಳ ಕೋಣಗಳ ಮಾಲಕರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟ್‌ಕೋಪರ್‌ನ ಭಾರತ್ ಕೆಫೆ ಸಂಸ್ಥಾಪಕ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ ಪ್ರತೀ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಸೇವಾಕರ್ತ ಸತೀಶ್ ವಿಠಲ ಶೆಟ್ಟಿ ಸ್ವಾಗತಿಸಿದರು. ಉದಯ ಶೆಟ್ಟಿ ಎರ್ಮಾಳ್, ಐಕಳ ವಿಶ್ವನಾಥ ಶೆಟ್ಟಿ ಮತ್ತು ವಿಶುಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು.

ಶ್ರೀ ಕಟೀಲು ಮೇಳದವರಿಂದ “ರಾಮ-ಕೃಷ್ಣ-ಗೋವಿಂದ” ಯಕ್ಷಗಾನ ಬಯಲಾಟ ಜರಗಿತು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್