ಸಾರ್ವಜನಿಕ ಪರಿಸರದಲ್ಲಿ ತ್ಯಾಜ್ಯ ಎಸೆದವರ ಮೇಲೆ 5 ಸಾವಿರ ರೂ. ದಂಡ ವಿಧಿಸಿದ ಪಂಚಾಯತ್

ಕಾರ್ಕಳ : ಬೈಲೂರು-ಕೌಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ರಂಗನಪಲ್ಕೆ- ಕಾರ್ಕಳ ಪಿಡಬ್ಲ್ಯೂಡಿ ರಸ್ತೆಯ ಅಬ್ಬೆಟ್ಟು ಎಂಬ ಸಾರ್ವಜನಿಕ ಪರಿಸರದಲ್ಲಿ ತ್ಯಾಜ್ಯ ಎಸೆದವರ ಮೇಲೆ ಪಂಚಾಯತ್ 5 ಸಾ. ರೂ. ದಂಡ ವಿಧಿಸುವ ಕ್ರಮ ಕೈಗೊಂಡಿದೆ.

ಈ ಪ್ರದೇಶದಲ್ಲಿ ಕೆಲ ಸಮಯದಿಂದ ಕೋಳಿ, ಹಂದಿಯ ತ್ಯಾಜ್ಯ, ಡೈಪರ್, ಬಿಯರ್ ಬಾಟಲಿ ಮೊದಲಾದ ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದು ದುರ್ನಾತ ಬೀರುತ್ತಿತ್ತು. ಈ ಬಗ್ಗೆ ಸ್ಥಳೀಯರು ಪಂಚಾಯತ್‌ಗೆ ದೂರು ನೀಡಿದ್ದು, ಅನೇಕ ಬಾರಿ ಪಂಚಾಯತ್‌ ವತಿಯಿಂದ ಇಲ್ಲಿ ಸ್ವಚ್ಛತಾ ಕಾರ್ಯ ನಡೆಸಿರುತ್ತಾರೆ.

ಇದರೊಂದಿಗೆ ವಾರ್ಡ್‌ ಸದಸ್ಯ ವಿಶ್ವೇಶ್‌ ಅವರ ವಿಶೇಷ ಮುತುವರ್ಜಿಯಲ್ಲಿ ಪಂಚಾಯತ್‌ ವತಿಯಿಂದ ಇಲ್ಲಿ ಕಸ ಎಸೆಯುವವರ ಮೇಲೆ ಕಣ್ಣಾವಲು ಇಡುವ ಸಲುವಾಗಿ 360 ಡಿಗ್ರಿ ಚಲಿಸುವ ಸೋಲಾರ್ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಿಂದಾಗಿ ನಂತರದ ದಿನಗಳಲ್ಲಿ ಈ ಪ್ರದೇಶದಲ್ಲಿ ತ್ಯಾಜ್ಯ ಎಸೆದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದೀಗ ಅವರನ್ನು ಸ್ಥಳಕ್ಕೆ ಕರೆಯಿಸಿ ಅವರಿಂದಲೇ ಸ್ವಚ್ಛತೆಯನ್ನು ಮಾಡಿಸಿದ್ದಲ್ಲದೆ ತ್ಯಾಜ್ಯ ಎಸೆದವರಿಂದ 5 ಸಾ. ರೂ. ದಂಡ ವಸೂಲಾತಿಯ ಕ್ರಮ ಕೈಗೊಂಡಿದ್ದಾರೆ. ಪಂಚಾಯತ್‌ನ ಈ ಕ್ರಮ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಕ್ಕ ಸಿಕ್ಕಲ್ಲಿ ಕಸ ಬಿಸಾಡುವ, ತ್ಯಾಜ್ಯ ಸುರಿಯುವ ಮೂಲಕ ಅನಾಗರಿಕರಂತೆ ವರ್ತಿಸುವವರ ಮೇಲೆ ದಂಡ ಹಾಕದ ಹೊರತು ಪರಿಸರವನ್ನು ಸ್ವಚ್ಛವಾಗಿಡುವುದು ಅಸಾಧ್ಯದ ಮಾತು. ಕೇವಲ ಜಾಗೃತಿ ಮೂಡಿಸಿದಲ್ಲಿ ಪರಿಣಾಮವಾಗದು. ಪಂಚಾಯತ್‌ ವ್ಯಾಪ್ತಿಯಲ್ಲಿ ಪಿಡಿಒಗಳು, ಪುರಸಭೆ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿ, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ದಂಡ ವಿಧಿಸುವ ಅಧಿಕಾರ ಹೊಂದಿದ್ದು, ಪರಿಸರ ಸ್ವಚ್ಛವಾಗಿಟ್ಟುಕೊಳ್ಳದವರ ವಿರುದ್ಧ ದೊಡ್ಡ ಮೊತ್ತದ ದಂಡವೇ ವಿಧಿಸಬೇಕಾಗಿದೆ. ಪೊಲೀಸರು ಇಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕೇಸ್‌ ಜಡಿಯಬೇಕಾಗಿದೆ. ಈ ಮೂಲಕ ಸ್ವಚ್ಛತೆಯ ಪಾಠ ತಿಳಿಸಿಕೊಡುವ ಕೆಲಸವಾಗಬೇಕಿದೆ.

ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್‌, ತ್ಯಾಜ್ಯ ಸುರಿಯದೇ ಇದ್ದಲ್ಲಿ ಕಸ ಹೆಕ್ಕುವ ಪ್ರಮೇಯವೂ ಇರುವುದಿಲ್ಲ. ಸ್ವಚ್ಛತೆ ಕಾಯ್ದುಕೊಳ್ಳದ ಹೊರತು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಪರಿಸರವಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಪ್ರತಿಯೋರ್ವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಇಡೀ ದೇಶವೇ ಸುಂದರವಾಗಿರಲಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ