ಜೂ.17ಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ : ಕಿಶೋರ್ ಕುಮಾರ್ ಕುಂದಾಪುರ

ಉಡುಪಿ : ಯಾವುದೇ ಸಂಪನ್ಮೂಲದ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಾಗಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಅನುಷ್ಠಾನಗೊಳಿಸದೆ ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಅಗತ್ಯ ವಸ್ತುಗಳ ದರದ ಜೊತೆಗೆ ಪೆಟ್ರೋಲ್ ಡೀಸೆಲ್ ದರವನ್ನು ದಿಡೀರ್ ಏರಿಕೆ ಮಾಡಿರುವುದು ಖಂಡನೀಯ. ರಾಜ್ಯ ಸರಕಾರದ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಜೂ.17 ರಂದು ಬೆಳಿಗ್ಗೆ 11.30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಮೂಲಭೂತ ಆದ್ಯತೆಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಚಿವರಿಗೆ ಹೊಸ ಕಾರು ಖರೀದಿ ಸಹಿತ ಅನಗತ್ಯ ದುಂದುವೆಚ್ಚಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಂಧನ ದರ ಏರಿಕೆ ಮೂಲಕ ಗಾಯದ ಮೇಲೆ ಬರೆ ಹಾಕಿದೆ.

ಹಳಿ ತಪ್ಪಿದ ಕಾನೂನು ಸುವ್ಯವಸ್ಥೆ, ವಾಲ್ಮೀಕಿ ನಿಗಮದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಲೋಕಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣವನ್ನು ನಡೆಸುತ್ತಾ ರಾಜ್ಯವನ್ನು ದಿವಾಳಿಯ ಅಂಚಿಗೆ ದೂಡಿರುವುದು ವಾಸ್ತವ. ಆದರೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎನ್ನುವ ಪೊಳ್ಳು ಮಾತುಗಳಿಂದ ಮಂಕು ಬೂದಿ ಎರಚುತ್ತಾ ಸದ್ದಿಲ್ಲದೇ ಜನತೆಯ ಜೇಬಿಗೆ ಕತ್ತರಿ ಹಾಕುತ್ತಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ, ಇಂಧನ ದರ ಏರಿಕೆಯು ಎಲ್ಲ ಕ್ಷೇತ್ರಗಳಿಗೂ ಪರಿಣಾಮ ಬೀರಿ ಜನತೆಯ ಜೀವನ ದುಸ್ತರವಾಗುತ್ತದೆ ಎಂದು ಪುಂಖಾನುಪುಂಖ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಪೆಟ್ರೋಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. ಹಾಗೂ ಡೀಸೆಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. 50 ಪೈಸೆಗೆ ಏರಿಸಿರುವ ರಾಜ್ಯ ಸರಕಾರದ ಘನoಧಾರಿ ಕಾರ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದ ಖಜಾನೆಯನ್ನು ಬರಿದಾಗಿಸಿ ವಿಪರೀತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ದರವನ್ನು ಏರಿಸುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವುದು ಜಗಜ್ಜಾಹೀರಾಗಿದೆ. ಜನರಿಂದಲೇ ಸುಲಿಗೆ ಮಾಡಿ ಜನತೆಗೆ ಉಚಿತ ಖಚಿತ ನಿಶ್ಚಿತ ಖಂಡಿತಗಳ ಗ್ಯಾರಂಟಿ ನೀಡುವ ಔಚಿತ್ಯವೇನಿದೆ ಎಂಬುದನ್ನು ಅರಿಯುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ.

ರಾಜ್ಯ ಸರಕಾರ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅದೇಶವನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಜನಪರ ಹೋರಾಟ ನಡೆಸಲಿದೆ. ಕಾಂಗ್ರೆಸ್ಸಿನ ಈ ಜನ ವಿರೋಧಿ ನೀತಿಗೆ ಜನತೆ ಮುoದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ