ಭ್ರೂಣಲಿಂಗ ಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ : ಜಿಲ್ಲಾಧಿಕಾರಿ

ಮಣಿಪಾಲ : ಜಿಲ್ಲೆಯಲ್ಲಿ ಅನಧಿಕೃತವಾಗಿ ಸ್ಕ್ಯಾನಿಂಗ್‌ ಸೆಂಟರ್‌ಗಳು ನಡೆಯುತ್ತಿರುವ ಬಗ್ಗೆ ಹಾಗೂ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಕಂಡು ಬಂದ ಬಗ್ಗೆ ಮಾಹಿತಿ ನೀಡಿದಲ್ಲಿ ಅವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು. ಪ್ರಸಕ್ತ ಸಾಲಿನ ಈವರೆಗೆ 302 ಗರ್ಭಪಾತ ಪ್ರಕರಣಗಳಾಗಿವೆ. ಅವುಗಳಲ್ಲಿ 84 ಸ್ವಾಭಾವಿಕ ಗರ್ಭಪಾತವಾಗಿವೆ. ಕಾನೂನು ಬಾಹಿರವಾಗಿ ವೈದ್ಯರ ಸಲಹೆಗಳಿಲ್ಲದೆ ಭ್ರೂಣ ಪತ್ತೆಗಳು ನಡೆಯುತ್ತಿರುವ ಬಗ್ಗೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ.ನ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಜರಗಿದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 3 ತಾಯಿ-ಮರಣ ಪ್ರಕರಣಗಳಾಗಿವೆ. ಅವುಗಳಲ್ಲಿ 2 ಹೊರಜಿಲ್ಲೆಗಳ ಪ್ರಕರಣಗಳಿವೆ. ಬಾಣಂತಿಯರಿಗೆ ಪ್ರಾರಂಭದಿಂದಲೇ ತಾಯಿ ಕಾರ್ಡ್‌ಗಳನ್ನು ವಿತರಿಸಿ, ನಿರಂತರ ಆರೋಗ್ಯ ತಪಾಸಣೆ ಮಾಡಬೇಕು. ಹೆರಿಗೆ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ತಾಯಿ ಮರಣ ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಎಂಡೋಸಲ್ಫಾನ್‌ ಬಾಧಿತರ ಆರೋಗ್ಯ ಸುದಾರಣೆ ಹಾಗೂ ಪುನರ್ವಸತಿ ಕಾರ್ಯ‌ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು. ಅವರಿಗೆ ಮಾಸಾಶನ ನಿಗದಿತ ಅವಧಿಯಲ್ಲಿ ಪಾವತಿ ಆಗುತ್ತಿವೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ಬೈಂದೂರಿನ ನಾಡ ಗ್ರಾ.ಪಂ.ನ ಸೇನಾಪುರ ಗ್ರಾಮದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ