ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಉಡುಪಿ : ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂಗಳ ಧಾರ್ಮಿಕ ಭಾವನೆ, ಸಂಸ್ಕೃತಿ ಆಚರಣೆಗಳ ಬಗ್ಗೆ ನಿರಂತರ ಧಕ್ಕೆ ತರುವ ಕಾರ್ಯಕ್ಕೆ ಮುಂದಾಗಿದ್ದು, ಇದರ ಮುಂದುವರೆದ ಭಾಗವಾಗಿ ಮೊನ್ನೆ ಕಾರ್ಕಳದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಕರಾವಳಿ ಜಿಲ್ಲೆಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಳುನಾಡಿನ ಗಂಡು ಕಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಅನಾದಿ ಕಾಲದಿಂದಲೂ ಶ್ರದ್ದಾ ಭಕ್ತಿಯಿಂದ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿಯೂ ನಡೆಯುತ್ತಿದ್ದ ಯಕ್ಷಗಾನ ಕಲೆಗೆ ಹಲವು ಕಾನೂನುಗಳ ನೆಪವೊಡ್ಡಿ ತಡೆ ಮಾಡಿ ಮತೀಯ ಶಕ್ತಿಗಳ ಓಲೈಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಯಕ್ಷಗಾನ, ನಾಗಮಂಡಲ, ದೈವಾರಾಧನೆಯ ಭಾಗವಾಗಿ ಸಾಂಪ್ರದಾಯಿಕ ಕೋಳಿ ಅಂಕಗಳು ತುಳುನಾಡಿನ ಸಂಸ್ಕೃತಿಯ ಭಾಗವಾಗಿದ್ದರೂ ಪೊಲೀಸ್ ಇಲಾಖೆ ರಾಜ್ಯ ಸರ್ಕಾರದ ಕೈಗೊಂಬೆಯಾಗಿ ಅನುಮತಿ ನೀಡದೇ ಪರೋಕ್ಷವಾಗಿ ಹತ್ತಿಕ್ಕಲು ಸಿದ್ದರಾಮಯ್ಯ ಸರ್ಕಾರ ಯತ್ನಿಸುತ್ತಿದೆ.

ರಾಜ್ಯ ಸರ್ಕಾರ ಒಂದು ಕಡೆ ಯಕ್ಷಗಾನ ಆಕಾಡೆಮಿ ಸ್ಥಾಪಿಸಿ ಯಕ್ಷಗಾನ ಉಳಿವಿಗೆ ಕೊಡುಗೆ ನೀಡುವಂತೆ ಬಿಂಬಿಸಿ, ಇನ್ನೊಂದು ಕಡೆ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುವ ಮೂಲಕ ಸರ್ಕಾರದ ದ್ವಂದ್ವ ನೀತಿಯನ್ನು ಜನತೆಯ ಮುಂದೆ ಪ್ರದರ್ಶಿಸಿದೆ.

ಹಲವಾರು ಭಕ್ತರು ತಮ್ಮ ಹರಕೆ ಸೇವೆಗಾಗಿ ಹಲವು ವರ್ಷಗಳ ಕಾಲ ಕಾದು ಆಯೋಜಿಸಿರುವ ವಿವಿಧ ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ಸರ್ಕಾರ ತೊಂದರೆ ನೀಡುತ್ತಿರುವುದು ಅಕ್ಷಮ್ಯವಾಗಿದ್ದು ಸರ್ಕಾರ ಕೂಡಲೇ ಕರಾವಳಿ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಾಗಿ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !