ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆಯು ದಿನೇ ದಿನೇ ಹೆಚ್ಚಿ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು ಪಾಕಿರ್ಂಗ್ ವ್ಯವಸ್ಥೆ ಇಲ್ಲದೆ ಇರುವುದು, ಅನಧಿಕೃತವಾಗಿ ರಚನೆಗೊಂಡಿರುವ ಗೂಡಂಗಡಿಗಳು, ತಳ್ಳುವ ಗಾಡಿಗಳು ರಸ್ತೆಯಲ್ಲಿಯೇ ವ್ಯಾಪಾರ ಕೈಗೊಳ್ಳುವುದು ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಉಡುಪಿ ನಗರದ ವ್ಯಾಪ್ತಿಯಲ್ಲಿ 58 ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಮುಂಭಾಗ ರಸ್ತೆಯ ಮೇಲೆ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಪಾರ್ಕಿಂಗ್ ಮಾಡುವ ಹಿನ್ನೆಲೆ, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ನಗರಸಭೆ ವತಿಯಿಂದ ಕಟ್ಟಡಗಳು ನಿರ್ಮಾಣಕ್ಕೆ ಅನುಮತಿ ಪಡೆದ ಸಂದರ್ಭದಲ್ಲಿ ನಿಯಮಾನುಸರ ಪಾಲಿಸಬೇಕಾದ ಪಾರ್ಕಿಂಗ್ ನಿಯಮಗಳನ್ನು ಪಾಲಿಸದೇ ನಿರ್ಮಾಣ ಮಾಡುವುದು ಕಂಡು ಬಂದಿದೆ. ಕಟ್ಟಡದ ಮಾಲೀಕರಿಗೆ ನೋಟೀಸ್ ನೀಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು ಎಂದರು.
ನಗರದ ಸರ್ವಿಸ್ ಬಸ್ ನಿಲ್ದಾಣದ ಸುತ್ತಮುತ್ತ, ಬೋರ್ಡ್ ಹೈಸ್ಕೂಲ್ಗಳ ಮುಂಭಾಗ ಗೂಡಂಗಡಿ ನಿರ್ಮಾಣದಿಂದ ಹಾಗೂ ತಳ್ಳುವ ಗಾಡಿಗಳಲ್ಲಿ ಹಣ್ಣು ಹಂಪಲು ಮಾರಾಟ, ಫಾಸ್ಟ್ ಫುಡ್ ವಾಹನಗಳಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇವುಗಳನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ನಗರಸಭಾ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆಯಿಂದ ವಿವಿಧ ಮಾರಾಣಾಂತಿಕ ರಸ್ತೆ ಅಪಘಾತ ಮಾಡಿದ 82 ಆರೋಪಿಗಳ ಡ್ರೈವಿಂಗ್ ಲೈಸನ್ಸ್ ಅನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದ್ದು, ಈಗಾಗಲೇ 59 ಜನರ ಲೈಸನ್ಸ್ ಅನ್ನು ರದ್ದು ಮಾಡಲಾಗಿದೆ. ಉಳಿದ 23 ಜನರ ಡ್ರೈವಿಂಗ್ ಲೈಸನ್ಸ್ ಅನ್ನು ಒಂದು ವಾರದ ಒಳಗಾಗಿ ರದ್ದು ಪಡಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ರಾಷ್ಟೀಯ ಹೆದ್ದಾರಿಗಳಲ್ಲಿ ಗುರುತಿಸಿರುವ ಕಪ್ಪು ಚುಕ್ಕೆ ಪ್ರದೇಶಗಳಲ್ಲಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಶಾಶ್ವತ ಸುರಕ್ಷತಾ ನಿರ್ವಹಣಾ ಕಾಮಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದ ಅವರು ರಸ್ತೆಯ ಸಮೀಪವಿರುವ ಶಾಲೆಗಳ ಮುಂಭಾಗ ಸೂಚನಾ ಫಲಕಗಳನ್ನು ಹಾಗೂ ಝೀಬ್ರಾ ಪಟ್ಟಿ ಸಮೇತ ಹಂಪ್ಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಬೇಕು ಎಂದು ಸೂಚನೆ ನೀಡಿದರು. 2023 ಹಾಗೂ 2024 ನೇ ಸಾಲಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಲಾದ 20 ಪ್ರಕರಣಗಳ ಗಾಯಗೊಂಡವರಿಗೆ ಹಾಗೂ ಮೃತಪಟ್ಟ ಕುಟುಂಬಗಳ ಅವಲಂಬಿತ ಸದಸ್ಯರುಗಳಿಗೆ ಸೊಲೋಟಿಯಂ ಯೋಜನೆಯಡಿ ಪರಿಹಾರ ನೀಡಲು ಜನರಲ್ ಇನ್ಸೂರೆನ್ಸ್ ಕಂಪನಿಗೆ ಸೂಚಿಸಲಾಗಿತ್ತು. ಈವರೆಗೆ 13 ಪ್ರಕರಣಗಳಲ್ಲಿ ಪರಿಹಾರವನ್ನು ಮಂಜೂರು ಮಾಡಿರುವುದಿಲ್ಲ. ಕೂಡಲೇ ನಿಯಮಾನುಸಾರ ಮಂಜೂರು ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಎನ್.ಹೆಚ್ ನ ಎ.ಐ ಅನಿರುದ್ದ್ ಕಾಮತ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.