ನೇಜಾರು ನಾಲ್ವರ ಹತ್ಯೆ ಪ್ರಕರಣ: ಆರೋಪಿಯ ಕಾರು ತಮ್ಮ ವಶಕ್ಕೆ ನೀಡುವಂತೆ ಬ್ಯಾಂಕ್‌ನಿಂದ ಅರ್ಜಿ

ಉಡುಪಿ : ಇಲ್ಲಿನ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡುವಂತೆ ಸಂಬಂಧಪಟ್ಟ ಬ್ಯಾಂಕಿನವರು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸಲ್ಲಿಸಿರುವ ಈ ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ತನ್ನ ವಾದ ಮಂಡಿಸಿದರು. ಆರೋಪಿ ಕೃತ್ಯ ಎಸಗಿದ ಹಿಂದಿನ ದಿನ ಅದೇ ಕಾರಿನಲ್ಲಿ ಹೆಜಮಾಡಿ ಟೋಲ್ ಮೂಲಕ ಸಂತೆಕಟ್ಟೆ ಕಡೆಗೆ ಹೋಗಿರುವುದರಿಂದ ಸಾಕ್ಷ್ಯ ವಿಚಾರಣೆ ಸಂದರ್ಭ ಟೋಲ್ ಸಿಬ್ಬಂದಿ ಕಾರನ್ನು ಗುರುತಿಸಬೇಕಾಗಿದೆ. ಅದೇ ರೀತಿ ಸಾಕ್ಷಿ ವಿಚಾರಣೆ ಸಂದರ್ಭ ಬೇರೆ ಬೇರೆ ಸಾಕ್ಷಿಗಳಿಗೆ ಕಾರು ಅಗತ್ಯವಾಗಿರುವುದರಿಂದ ಬ್ಯಾಂಕಿನ ವಶಕ್ಕೆ ನೀಡದಂತೆ ಆಕ್ಷೇಪಣೆ ಸಲ್ಲಿಸಿದರು.

ಬ್ಯಾಂಕಿನ ಪರ ವಕೀಲರು ವಾದ ಮಂಡಿಸಲು ಸಮಯಾವಕಾಶವನ್ನು ಕೇಳಿದರು. ಅದರಂತೆ ನ್ಯಾಯಾಧೀಶ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿ ಆದೇಶ ನೀಡಿದರು. ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Related posts

ಗುಜರಿ ಅಂಗಡಿ ಗೋಡೌನ್‌ನಲ್ಲಿ ಭಾರೀ ಬೆಂಕಿ ಅವಘಡ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಜಾತಿ ನಿಂದನೆ ಹಲ್ಲೆ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ

ಫುಟ್ಬಾಲ್‌ ಪಂದ್ಯಾಟದ ವೇಳೆ ಗ್ಯಾಲರಿ ಕುಸಿತ..!