ಉಡುಪಿ : ಜಿಲ್ಲೆಯಾದ್ಯಂತ ಇಂದು ಪಂಚಮಿ ಹಬ್ಬವನ್ನು ಭಕ್ತಿ–ಭಾವದಿಂದ ಆಚರಿಸಲಾಯಿತು. ಬೆಳಿಗ್ಗೆಯೇ ನಾಗಬನಗಳಿಗೆ ತೆರಳಿದ ಜನರು ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು.
ನಾಗರ ಪಂಚಮಿಯ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಉಡುಪಿಯ ಕೃಷ್ಣಮಠ, ಕಡೆಕಾಡಿನ ಶ್ರೀ ಲಕ್ಷ್ಮೀನಾರಾಯಣ ಮಠದ ಶ್ರೀ ನಾಗ ದೇವರ ಗುಡಿ, ಉಡುಪಿಯ ಹೊರ ವಲಯದ ದೊಡ್ಡಣಗುಡ್ಡೆಯ ಸಗ್ರಿಯ ನೈಸರ್ಗಿಕ ನಾಗಬನದಲ್ಲಿಯೂ ವಿಶೇಷ ಪೂಜೆ ಮಾಡಲಾಯಿತು.
ನಾಗನಿಗೆ ಹಾಲಿನ ಅಭಿಷೇಕ, ಸಿಯಾಳ ಅಭಿಷೇಕ ಮಾಡಿ ತಂಬಿಲ ಅರ್ಪಿಸಲಾಯಿತು. ಉಡುಪಿ ನಗರದ ಕಿದಿಯೂರು ಹೋಟೆಲ್ ಮುಂಭಾಗ ಇರುವ ನಾಗಬನದಲ್ಲಿಯೂ ಅಭಿಷೇಕ ನಡೆಯಿತು. ಪೂಜಾಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಕುಂದಾಪುರ ಹಾಗೂ ಕಾರ್ಕಳ ತಾಲ್ಲೂಕಿನ ವಿವಿಧ ಭಾಗಗಳಲ್ಲಿರುವ ನಾಗಬನ ಹಾಗೂ ದೇವಸ್ಥಾನಗಳಲ್ಲಿಯೂ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.