ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ : ಆರೋಪಿಗೆ ಮರಣ ದಂಡನೆ ಪ್ರಕಟ

ಮಂಗಳೂರು : ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿದ ಮತ್ತು ಪತ್ನಿಯನ್ನು ಕೊಲೆಗೆ ಯತ್ನಿಸಿದ ಅಪರಾಧಿ ಮುಲ್ಕಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಎಂಬಲ್ಲಿಯ ಹಿತೇಶ್ ಶೆಟ್ಟಿಗಾರ್ ಯಾನೆ ಹಿತೇಶ್ ಕುಮಾರ್ (43) ಎಂಬಾತನಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಮುಲ್ಕಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಎಂಬಲ್ಲಿ 2022 ಜೂನ್ 23ರಂದು ಸಂಜೆ ಆರೋಪಿಯು ಈ ದುಷ್ಕೃತ್ಯವನ್ನು ಎಸಗಿದ್ದನು. ತನ್ನ ಮಕ್ಕಳಾದ ರಶ್ಮಿತಾ(14 ವರ್ಷ), ಉದಯ ಕುಮಾರ್ (11 ವರ್ಷ), ದಕ್ಷಿತ್ ಯಾನೆ ದಕ್ಷೆ ಕುಮಾರ್(4 ವರ್ಷ) ಎಂಬವರನ್ನು ತನ್ನ ಮನೆಯ ಬಳಿ ಇರುವ ಅಶೋಕ್ ಶೆಟ್ಟಿಗಾರ್ ಎಂಬುವವರ ನೀರು ತುಂಬಿದ್ದ ಬಾವಿಗೆ ಹಾಕಿ ಹತ್ಯೆ ಮಾಡಿದ್ದನು. ನಂತರ ಕೆಲಸದಿಂದ ಬಂದು ತನ್ನ ಮಕ್ಕಳನ್ನು ಹುಡುಕುತ್ತಿದ್ದ ಹೆಂಡತಿ ಲಕ್ಷ್ಮೀಯವರನ್ನು ಕೂಡಾ ಅದೇ ಬಾವಿಗೆ ದೂಡಿ ಹಾಕಿ ಹತ್ಯೆ ಯತ್ನ ನಡೆಸಿದ್ದನು.

ಆರೋಪಿಯು ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗದೇ ಹೆಂಡತಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆಂದು ಈ ಕೃತ್ಯವನ್ನು ಎಸಗಿದ್ದನು. ಪತ್ನಿ ಮಕ್ಕಳನ್ನು ಸಾಯಿಸಿದ್ದಲ್ಲಿ ತನಗೆ ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ತನ್ನ ಮೂರು ಮಕ್ಕಳನ್ನು ಬಾವಿಗೆ ಹಾಕಿ ಕೊಲೆ ಮಾಡಿ ತನ್ನ ಹೆಂಡತಿಯನ್ನು ಕೂಡಾ ಬಾವಿಗೆ ದೂಡಿ ಹಾಕಿ ಕೊಲೆಗೆ ಪ್ರಯತ್ನಿಸಿದ್ದಾನೆ. ಬಾವಿಗೆ ಬಿದ್ದ ಮಕ್ಕಳು ಬಾವಿಯೊಳಗಿನ ಹಗ್ಗದಲ್ಲಿ ನೇತಾಡುವುದನ್ನು ನೋಡಿದ ಆರೋಪಿ ತಂದೆ ಕತ್ತಿ ತಂದು ಹಗ್ಗವನ್ನು ತುಂಡರಿಸಿದ್ದನು.
‌‌ಆರೋಪಿಯ ವಿರುದ್ಧ ಮಂಗಳೂರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ನಂ 42/2022 ರಲ್ಲಿ ಪ್ರಕರಣವು ದಾಖಲಾಗಿತ್ತು. ಮುಲ್ಕಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಕುಸುಮಾಧರ್ ಕೆ.‌ ರವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಕಲಂ 302, 307 ಐಪಿಸಿ ನಂತೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣವು ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿದೆ‌.‌ ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ 3‌ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್ ರವರು ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ: 302 ರಡಿಯ ಅಪರಾಧಕ್ಕೆ ಮರಣದಂಡನೆ/ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ: 307 ರಡಿಯ ಅಪರಾಧಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿರುತ್ತದೆ.

ನೊಂದ ಮೃತ ತಾಯಿಯಾದ ಲಕ್ಷ್ಮೀ‌ರವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯವು ಆದೇಶಿಸಿರುತ್ತದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ.ರವರು ನಡೆಸಿ ವಾದವನ್ನು ಮಂಡಿಸಿದ್ದರು.

Related posts

ಆಟೋ ಚಾಲಕ ನೇಣಿಗೆ ಶರಣು

ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳ ಜಾಮೀನಿಗೆ ಶ್ಯೂರಿಟಿದಾರನಾಗಿ ವಂಚನೆ – ಆರೋಪಿ ಅಂದರ್

ಚಾಕು ತೋರಿಸಿ ಮೆಡಿಕಲ್ ಶಾಪ್‌ನಲ್ಲಿ ಹಣ ಸುಲಿಗೆಗೈದ ಆರೋಪಿ ಅರೆಸ್ಟ್