ಉಡುಪಿ : ವರ್ಷದ ಹಿಂದೆ ಕರಾವಳಿ ಜಂಕ್ಷನ್ ಬಳಿ ನಡೆದ ವಲಸೆ ಕಾರ್ಮಿಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಳಕಲ್ ನಿವಾಸಿಗಳಾದ ಕನಕಪ್ಪ ಹನುಮಂತ ರೋಡಿ(46), ಯಮನೂರ ತಿಪ್ಪಣ್ಣ ಮಾರಣ ಬಸರಿ(24), ಯಮನೂರಪ್ಪಜೇಡಿ(26) ಬಂಧಿತ ಆರೋಪಿಗಳು.
ಗುಜರಿ ಹೆಕ್ಕುತ್ತಿದ್ದ ಸುಮಾರು 45 ರಿಂದ 48 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರನ್ನು 2023ರ ಅಕ್ಟೋಬರ್ 16ರಂದು ರಾತ್ರಿ ವೇಳೆ ಹೋಟೇಲ್ ಕರಾವಳಿ ಬಳಿ ಹರಿತವಾದ ಆಯುಧದಿಂದ ಬಲಕೈಯನ್ನು ಕಡಿದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಮೃತರನ್ನು ಹುಬ್ಬಳ್ಳಿಯ ಕಿತ್ತೂರ ಯಾನೆ ಸಿದ್ದಪ್ಪ ಶಿವನಪ್ಪ ಎಂದು ಗುರುತಿಸಿದ್ದರು.
ಈ ಕುರಿತು ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.