ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ 196 ಬಿಎಸ್‌ಎನ್‌ಎಲ್‌ ಟವರ್‌ಗಳ ಪೈಕಿ 73ರಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲ ಎಂಬ ಮಾಹಿತಿಯನ್ನು ಬಿಎಸ್‌ಎನ್‌ಎಲ್ ಅಧಿಕಾರಿಗಳು ಕುಂದಾಪುರ ತಾಪಂ ಸಭಾಂಗಣ‌ದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟವನ್ನು ಉತ್ತಮಗೊಳಿಸುವಿಕೆ ಹಾಗೂ ಸಲಹೆ ಸೂಚನೆಗಳ ಕುರಿತ ಸಭೆಯಲ್ಲಿ ನೀಡಿದ್ದಾರೆ.

ಬ್ಯಾಟರಿ ಬ್ಯಾಕಪ್ ಇಲ್ಲದೆ ಗುಡುಗು-ಮಿಂಚು ಬಂದಾಗ ಬ್ಯಾಟರಿ ದುಸ್ಥಿತಿಗೆ ತಲುಪುತ್ತದೆ. ಈಗಾಗಾಲೇ 10 ಬ್ಯಾಟರಿ ಬ್ಯಾಕಪ್ ಕೇಂದ್ರ ಸರಕಾರದ ಅನುದಾನದಿಂದ ಬಂದಿದ್ದು ಉಳಿದಿದ್ದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ವಿದ್ಯುತ್ ಸಂಪರ್ಕ ಕಡಿತವಾದಾಗ ಬ್ಯಾಟರಿ, ಜನರೇಟ‌ರ್ ಸಂಪರ್ಕ ಗೊಳಿಸಲು ಗ್ರಾ.ಪಂ ಸಿಬ್ಬಂದಿ (ಪಂಪು ಚಾಲಕ) ನೇಮಕ ಸೂಕ್ತ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು. ತುರ್ತು ಸಮಯಕ್ಕೆ ಅನುಕೂಲವಾಗುವಂತೆ ಪ್ರತಿ ಟವರ್ ಇರುವಲ್ಲಿ ಡಿ.ಜಿ. ಬ್ಯಾಟರಿ ನೀಡಲು ಹಾಗೂ ಗ್ರಾಪಂ ಒಂದಕ್ಕೆ ನಿರ್ವಹಣೆಗೆ ತಿಂಗಳಿಗೆ 3 ಸಾವಿರ ಹಣ ನೀಡಲು ನಿರ್ಧರಿಸಲಾಯಿತು.

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಲಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ವಾದರೆ ಬಿಎಸ್‌ಎನ್‌ಎಲ್ ಸಂಪರ್ಕ ಕಡಿತಗೊಳ್ಳುತ್ತದೆ. ಬ್ಯಾಟರಿ, ಜನರೇಟ‌ರ್ ಮೊದಲಾದ ಮೂಲ ಸೌಕರ್ಯ ಒದಗಿಸಿ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಮಡಾಮಕ್ಕಿ, ಅಮಾಸೆಬೈಲು ಬೊಳ್ಳೆನೆ ಮೊದಲಾದೆಡೆ ಹೊಸದಾಗಿ ಟವರ್ ನಿರ್ಮಿಸಿದ್ದು ಸರಿಯಾದ ನೆಟ್‌ವರ್ಕ್‌ ಇಲ್ಲದೆ ಜನರು ಪರದಾಡುತ್ತಿದ್ದಾರೆ ಎಂದು ದೂರಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ